ಇಟಾನಗರ: ಅರುಣಾಚಲ ಪ್ರದೇಶದ 11 ಪ್ರದೇಶಗಳ ಹೆಸರನ್ನು ಚೀನಾ ಬದಲಾಯಿಸಿ ಉದ್ಧಟತನ ಮೆರೆದ ಬೆನ್ನಲ್ಲೇ ಗಡಿ ರಾಜ್ಯಕ್ಕೆ ಸೋಮವಾರ ಭೇಟಿ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ನಮ್ಮ ಭೂಮಿಯ ಒಂದು ಸೂಜಿಮೊನೆಯಷ್ಟು ಭಾಗವನ್ನೂ ಯಾರಿಂದಲೂ ಕಬಳಿಸಲು ಸಾಧ್ಯವಿಲ್ಲವೆಂದು ಚೀನಾ ವಿರುದ್ಧ ಗುಡುಗಿದ್ದಾರೆ.
ಅರುಣಾಚಲ ಪ್ರದೇಶ ತನ್ನದು ಎಂಬ ಹಠ ಮುಂದುವರಿಸಿರುವ ಚೀನಾ,ಅಮಿತ್ ಶಾ ಭೇಟಿಯಿಂದ ಪ್ರಾದೇಶಿಕ ಶಾಂತಿಗೆ ಭಂಗ ಬರುತ್ತದೆ ಎಂದು ಸೋಮವಾರ ಹೇಳಿತ್ತು. ಇದಕ್ಕೆ ಪ್ರತಿಯಾಗಿ ಅರುಣಾಚಲದ ಗಡಿ ಗ್ರಾಮ ಕಿಬಿತೂದಲ್ಲಿ ವೈಬ್ರಂಟ್ ವಿಲೇಜಸ್ ಯೋಜನೆ ಪ್ರಾರಂಭಿಸಿ ಮಾತನಾಡಿದ ಅಮಿತ್ ಶಾ ತಿರುಗೇಟು ನೀಡಿ,ಯಾರೂ ಭಾರತದ ಪ್ರಾದೇಶಿಕ ಸಮಗ್ರತೆಯನ್ನು ಪ್ರಶ್ನಿಸುವಂತಿಲ್ಲ. ನಮ್ಮ ಭೂಮಿಯನ್ನು ಯಾರೂ ಅತಿಕ್ರಮಿಸಲು ಸಾಧ್ಯವಿಲ್ಲ ಎಂದರು.
2014ರ ಮೊದಲು, ಇಡೀ ಈಶಾನ್ಯ ಪ್ರದೇಶವನ್ನು ತೊಂದರೆಗೊಳಗಾದ ಪ್ರದೇಶವೆಂದು ಕರೆಯಲಾಗುತ್ತಿತ್ತು. ಆದರೆ ಕಳೆದ 9 ವರ್ಷಗಳಲ್ಲಿ, ಪ್ರಧಾನಿ ಮೋದಿಯವರ ನೀತಿಗಳಿಂದ ಈಶಾನ್ಯ ಅಭಿವೃದ್ಧಿ ಹೊಂದಿದೆ. ಈಶಾನ್ಯವನ್ನು ಈಗ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವ ಪ್ರದೇಶವೆಂದು ಪರಿಗಣಿಸಲಾಗಿದೆ ಎಂದು ಅಮಿತ್ ಶಾ ಹೇಳಿದರು. ಅಂದು ಕಿಬಿತೂವನ್ನು ದೇಶದ ಕೊನೆಯ ಗ್ರಾಮ ಎನ್ನಲಾಗುತ್ತಿತ್ತು. ಇಂದು ದೇಶದ ಮೊದಲ ಗ್ರಾಮ ಎಂದು ಕರೆಯುತ್ತೇವೆ, ಇದು ಪ್ರಧಾನಿ ಮೋದಿ ಕೈಗೊಂಡ ಅಭಿವೃದ್ಧಿ ಕೆಲಸಗಳ ದ್ಯೋತಕವಾಗಿದೆ ಅಮಿತ್ ಶಾ ಬಣ್ಣಿಸಿದರು.
ಸೇನೆ ಮತ್ತು ಗಡಿ ಪೊಲೀಸರನ್ನು ಶ್ಲಾಘಿಸಿದ ಅವರು, ನಮ್ಮ ಐಟಿಬಿಪಿ ಯೋಧರು ಮತ್ತು ಸೇನೆಯು ಗಡಿಯಲ್ಲಿ ಹಗಲಿರುಳು ಶ್ರಮಿಸುತ್ತಿರುವ ಕಾರಣ ಇಂದು ಇಡೀ ದೇಶದ ಜನರು, ಅವರವರ ಮನೆಗಳಲ್ಲಿ ಶಾಂತಿಯುತವಾಗಿ ಮಲಗಲು ಸಾಧ್ಯವಾಗಿದೆ. ಯಾರು ಬೇಕಾದರೂ ಭಾರತದ ಭೂಮಿಯನ್ನು ಅತಿಕ್ರಮಿಸುವ ದಿನಗಳು ಕಳೆದುಹೋಗಿವೆ. ಇನ್ನು ನಮ್ಮ ಭೂಮಿಯನ್ನು ಯಾರೂ ಅತಿಕ್ರಮಿಸಲು ಸಾಧ್ಯವಿಲ್ಲ, ಏಕೆಂದರೆ ಐಟಿಬಿಪಿ ಮತ್ತು ಭಾರತೀಯ ಸೇನೆ ನಮ್ಮ ಬಳಿ ಇದೆ. ಗಡಿಗಳು, ಎಲ್ಲ ಯೋಧರ ತ್ಯಾಗ ಬಲಿದಾನಗಳಿಗೆ ನಾನು ನಮಸ್ಕರಿಸುತ್ತೇನೆ 1962ರಲ್ಲಿ ಇಲ್ಲಿ ಭೂಮಿಯನ್ನು ಅತಿಕ್ರಮಿಸಲು ಬಂದವರು ನಿಮ್ಮ ದೇಶಪ್ರೇಮದಿಂದಾಗಿ ಹಿಂತಿರುಗಬೇಕಾಯಿತು ಎಂದು ಸೇನೆಯನ್ನು ಕೊಂಡಾಡಿದರು