ಉಡುಪಿ : ಉಡುಪಿ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾಗಿ, ಬುಧವಾರ ಜಿಲ್ಲಾ ಬಿಜೆಪಿ ಕಚೇರಿಗೆ ಆಗಮಿಸಿದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಎ.ಸುವರ್ಣ ಅವರನ್ನು ಪಕ್ಷದ ನೂರಾರು ಕಾರ್ಯಕರ್ತರು ಹುಮ್ಮಸ್ಸಿನಿಂದ ಸ್ವಾಗತಿಸಿದರು. ಹಾರ ಹಾಕಿ ಪಟಾಕಿ ಸಿಡಿಸಿ ಜೈಕಾರ ಹಾಕಿದರು. ಯುವ ಕಾರ್ಯಕರ್ತರು ಯಶ್ಪಾಲ್ ಸುವರ್ಣ ಅವರ ಕೈಗೆ ಕಂಕಣ ಕಟ್ಟಿಗೆದ್ದು ಬರುವಂತೆ ಹಾರೈಸಿದರು.
ನಂತರ ಯಶ್ಪಾಲ್ ಸುವರ್ಣ ಅವರು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯ ಮತ್ತು ಇತರ ನಾಯಕರೊಂದಿಗೆ ಪಕ್ಷದ ಕಚೇರಿಯಲ್ಲಿ ಸಮಾಲೋಚನೆ ನಡೆಸಿದರು ಮತ್ತು ಪಕ್ಷದ ಪ್ರಮುಖರ ಸಭೆ ನಡೆಸಿ ಚುನಾವಣಾ ಪ್ರಚಾರಕ್ಕೆ ಸಹಕಾರ ಕೋರಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶಟ್ಟಿ, ಗೀತಾಂಜಲಿ ಸುವರ್ಣ, ಸರೋಜಾ ಯಶವಂತ್, ನಗರಸಭೆ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ಬೈಲೂರು, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹಗ್ಡೆ, ಶಿವಕುಮಾರ್ ಅಂಬಲವಾಡಿ ಸೇರಿದಂತೆ ಯುವಮೋರ್ಚಾ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಯಶಪಾಲ್ಗೆ ಶ್ರೀರಾಮ ಸೇನೆ ಬೆಂಬಲ
ಕಾರ್ಕಳದಲ್ಲಿ ಬಿಜೆಪಿ ವಿರುದ್ಧ ಸ್ಪರ್ಧಿಸುತ್ತಿರುವ ಶ್ರೀರಾಮ ಸೇನೆ ಉಡುಪಿಯಲ್ಲಿ ಮಾತ್ರ ಬಿಜೆಪಿಯ ಅಭ್ಯರ್ಥಿ ಯಶ್ಪಾಲ್ ಸುವರ್ಣ ಅವರಿಗೆ ಬೆಂಬಲ ವ್ಯಕ್ತವಡಿಸಿದೆ. ಶ್ರೀರಾಮ ಸೇನೆ ಕಾರ್ಕಳ, ಉಡುಪಿ ಮತ್ತು ಬೈಂದೂರು ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿತ್ತು. ಆದರೆ ಉಡುಪಿಗೆ ಬಿಜೆಪಿ ಅಭ್ಯರ್ಥಿಯಾಗಿ ಯಶ್ಪಾಲ್ ಸುವರ್ಣ ಆಯ್ಕೆಯಾಗಿರುವುದರಿಂದ ಉಡುಪಿಯಲ್ಲಿ ಅವರ ವಿರುದ್ಧ ಸ್ಪರ್ಧಿಯನ್ನು ಇಳಿಸುವುದಿಲ್ಲ, ಬದಲಿಗೆ ಅವರಿಗೆ ಪೂರ್ಣ ಬೆಂಬಲ ನೀಡುವುದಾಗಿ ಸಂಘಟನೆಯ ಜಿಲ್ಲಾಧ್ಯಕ್ಷ ಜಯರಾಮ್ ಅಂಬೆಕಲ್ಲು ತಿಳಿಸಿದ್ದಾರೆ.