ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣಾ ಅಖಾಡ ರಂಗೇರಿದೆ. ಮೂರು ಪಕ್ಷಗಳು ಅಭ್ಯರ್ಥಿಗಳ ಘೋಷಣೆ ಮಾಡುತ್ತಿದ್ದರೆ, ಇತ್ತ ಬಂಡಾಯದ ಕಿಡಿ ಜೋರಾಗಿದೆ. ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡಿರುವ ಕಾಂಗ್ರೆಸ್ ಈಗಾಗಲೇ ಅಭ್ಯರ್ಥಿಗಳ 2 ಪಟ್ಟಿ ಪ್ರಕಟಗೊಳಿಸಿದೆ. ಇದೀಗ 3ನೇ ಪಟ್ಟಿ ಬಿಡುಗಡೆಗೆ ತಯಾರಿ ನಡೆಸಿದೆ .
ಇಂದು ರಾತ್ರಿ 3ನೇ ಪಟ್ಟಿ ಅಂತಿಮಗೊಳ್ಳಲಿದೆ, ಬಿಡುಗಡೆಯಾಗುವ ಸಾಧ್ಯತೆ ಇದೆ. ಬಾಕಿ ಉಳಿದಿರುವ 58 ಕ್ಷೇತ್ರಗಳ ಪೈಕಿ 30 ಕ್ಷೇತ್ರಗಳಿಗೆ 3ನೇ ಪಟ್ಟಿಯಲ್ಲಿ ಹೆಸರು ಘೋಷಿಸಲು ಕಾಂಗ್ರೆಸ್ ಮುಂದಾಗಿದೆ. ಇದಕ್ಕಾಗಿ ಇಂದು(ಏ.13) ಸಂಜೆ 7.30ಕ್ಕೆ ದೆಹಲಿಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಸಭೆ ಕರೆಯಲಾಗಿದೆ.
ಕಾಂಗ್ರೆಸ್ ನಾಯಕರಾದ ಕೆಸಿ ವೇಣುಗೋಪಾಲ್, ರಂದೀಪ್ ಸುರ್ಜೆವಾಲ, ಮಕುಲ್ ವಾಸ್ನಿಕ್ ಸೇರಿದಂತೆ ರಾಜ್ಯ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಗೆ ಚರ್ಚೆ ನಡೆಯಲಿದೆ. 3ನೇ ಪಟ್ಟಿಯಲ್ಲಿ 30 ಕ್ಷೇತ್ರಗಳಿಗೆ ಹೆಸರು ಅಂತಿಮಗೊಳಿಸುವ ಸಾಧ್ಯತೆ ಇದೆ. ಮೊದಲ ಪಟ್ಟಿಯಲ್ಲಿ ಕಾಂಗ್ರೆಸ್ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಪ್ರಕಟಿಸಿತ್ತು. ಬಳಿಕ 2ನೇ ಪಟ್ಟಿಯಲ್ಲಿ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿತ್ತು