ಕಾರ್ಕಳ: ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಯ ಡಬ್ಬಲ್ ಇಂಜಿನ್ ಸರ್ಕಾರ ಜತೆಗೆ ಕಾರ್ಕಳದಲ್ಲಿಯೂ ಬಿಜೆಪಿ ಜನಪ್ರತಿನಿಧಿ ಅಯ್ಕೆಯಾದಾಗ ಅಭಿವೃದ್ಧಿ ಕಾರ್ಯಚಟುವಟಿಕೆಗಳಿಗೆ ವೇಗ ಸಿಗುತ್ತದೆ.
ಕಳೆದ 5 ವರ್ಷಗಳಲ್ಲಿ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲು ನನಗೆ ಮತ್ತೆ ಆಶೀರ್ವಾದ ಮಾಡಿ ಕಾರ್ಕಳ ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸಿ ಎಂದು ಬಿಜೆಪಿ ಅಭ್ಯರ್ಥಿ ವಿ.ಸುನಿಲ್ ಕುಮಾರ್ ಮತದಾರರಲ್ಲಿ ಮನವಿ ಮಾಡಿದರು.
ಅವರು ಕಾರ್ಕಳ ವಿಕಾಸ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಬಿಜೆಪಿ ಹಿರಿಯ ನಾಯಕರ ಹಾಗೂ ಕಾರ್ಯಕರ್ತರ ಆಶಯದಂತೆ ಬಿಜೆಪಿ ಪಕ್ಷ ನನಗೆ ಈ ಬಾರಿ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಎಲ್ಲಾ ಕಾರ್ಯಕರ್ತರ ಬೆಂಬಲದೊಂದಿಗೆ ಬೃಹತ್ ಮೆರವಣಿಗೆ ಮೂಲಕ ಏಪ್ರಿಲ್19 ರಂದು ನಾಮಪತ್ರ ಸಲ್ಲಿಸುವುದಾಗಿ ಸುನಿಲ್ ಕುಮಾರ್ ಹೇಳಿದರು.
ಬಿಜೆಪಿಯ ಪ್ರತೀ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿ ನಡೆದಿದ್ದು ಗ್ರಾಮ ಮಟ್ಟದ ತಲಾ 150 ಕಾರ್ಯಕರ್ತರ ಅಭಿಪ್ರಾಯ ಪಡೆದುಬ ಕೇಂದ್ರೀಯ ಚುನಾವಣಾ ಸಮಿತಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಿರುವುದು ದೇಶದ ಇತಿಹಾಸದಲ್ಲೇ ಪ್ರಥಮ, ಇಷ್ಟೊಂದು ನ್ಯಾಯಸಮ್ಮತ ಆಯ್ಕೆ ಯಾವ ರಾಜಕೀಯ ಪಕ್ಷದವರು ಮಾಡಲು ಸಾಧ್ಯವೇ ಇಲ್ಲವೆಂದರು.
ಹಳಬರಿಗೆ ಕೋಕ್ ನೀಡಿ ಹೊಸಬರಿಗೆ ಅವಕಾಶ ನೀಡಿರುವುದರಿಂದ ಪಕ್ಷಕ್ಕೆ ಹಾನಿಯಾಗಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,ಒಂದು ಕುಟುಂಬಕ್ಕೆ ಜೋತುಬೀಳುವ ಪಕ್ಷ ನಮ್ಮದಲ್ಲ, ಬದಲಾವಣೆ ನಿರಂತರ ಪ್ರಕ್ರಿಯೆಯಾಗಿದ್ದು,ಕಳೆದ 2004 ರಲ್ಲಿ ನಾನು,ರಘುಪತಿ ಭಟ್,ಸಿ.ಟಿ ರವಿ,ಜೀವರಾಜ್ ಆಳ್ವ ಸೇರಿದಂತೆ ಹೊಸಬರಿಗೆ ಅವಕಾಶ ನೀಡಲಾಗಿತ್ತು,ಇದಾದ ಬಳಿಕ 2018ರಲ್ಲಿ ಹರೀಶ್ ಪೂಂಜಾ, ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ಭರತ್ ಶೆಟ್ಟಿ ಸೇರಿದಂತೆ ಹಲವು ಹೊಸಬರಿಗೆ ಟಿಕೆಟ್ ನೀಡಲಾಗಿತ್ತು,
ಬಿಜೆಪಿಯಲ್ಲಿ ವ್ಯಕ್ತಿಗಿಂತ ಪಕ್ಷದ ಸಿದ್ದಾಂತ ಮುಖ್ಯ ಈ ನಂಬಿಕೆಯನ್ನಿಟ್ಟುಕೊಂಡು ಪಕ್ಷ ಅಧಿಕಾರಕ್ಕೆ ಬಂದಿದೆ ಎಂದರು.ಯಾರು ಕೂಡ ವೈಯುಕ್ತಿಕ ವರ್ಚಸ್ಸಿನಿಂದ ಗೆಲ್ಲಲು ಸಾಧ್ಯವಿಲ್ಲ ಕಾರ್ಯಕರ್ತರ ಪರಿಶ್ರಮ ಇಲ್ಲದೇ ಗೆಲ್ಲಲು ಸಾಧ್ಯವಿಲ್ಲ,ಅವಕಾಶ ನೀಡಿಲ್ಲ ಎನ್ನುವ ಕಾರಣಕ್ಕೆ ಪಕ್ಷ ತೊರೆಯುವುದು ಸ್ವಾರ್ಥ ರಾಜಕಾರಣವಾಗುತ್ತದೆ ಎಂದು ಸುನಿಲ್ ಕುಮಾರ್ ಅಭಿಪ್ರಾಯಪಟ್ಟರು.
ಬಿಜೆಪಿಯಲ್ಲಿನ ಗೊಂದಲದ ಕುರಿತು ಸ್ಪಷ್ಟನೆ ನೀಡಿದ ಸುನಿಲ್ ಕುಮಾರ್, ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ,ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ಕೆಲವರು ಚುನಾವಣೆ ಸಂದರ್ಭದಲ್ಲಿ ಬಂದು ಭಾಷಣ ಬಿಗಿದ ಮಾತ್ರಕ್ಕೆ ಜನರು ನಂಬಲು ಸಿದ್ದರಿಲ್ಲ, ಕ್ಷೇತ್ರದ ಜನರ ಸುಖಕಷ್ಟಗಳಿಗೆ ಸ್ಪಂದಿಸುವ ಸುನಿಲ್ ಕುಮಾರ್ ಹಾಗೂ ಕಾರ್ಯಕರ್ತರನ್ನು ಮತದಾರರು ಎಂದಿಗೂ ಕೈಬಿಡುವುದಿಲ್ಲ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
′