ಜಮ್ಮು& ಕಾಶ್ಮೀರ : ಇಂದು ಜಮ್ಮು ಮತ್ತು ಕಾಶ್ಮೀರದ ಉಧಂಪುರದಲ್ಲಿ ಬೈಸಾಖಿ ಆಚರಣೆ ವೇಳೆ ಪಾದಚಾರಿ ಸೇತುವೆ ಕುಸಿದಿದ್ದು, 80 ಮಂದಿ ಗಾಯಗೊಂಡಿದ್ದಾರೆ. ಅದರಲ್ಲಿ 20 ರಿಂದ 25ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಬೈಸಾಖಿ ಆಚರಣೆಯ ಸಂದರ್ಭದಲ್ಲಿ ಚೆನಾನಿ ಬ್ಲಾಕ್‌ನ ಬೈನ್ ಗ್ರಾಮದ ಬೇಣಿ ಸಂಗಮದಲ್ಲಿ ಈ ಘಟನೆ ವರದಿಯಾಗಿದ್ದು, ಸೇತುವೆ ಕುಸಿದಾಗ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇತುವೆ ಮೇಲಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ಮತ್ತು ರಕ್ಷಣಾ ತಂಡಗಳು ಘಟನಾ ಸ್ಥಳಕ್ಕೆ ತೆರಳಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ. ಘಟನೆಯಲ್ಲಿ ಎಲ್ಲಾ ಗಾಯಾಳುಗಳನ್ನು ಚೆನಾನಿ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ
ಅಪಘಾತದ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಸೇತುವೆಯ ಮೇಲಿದ್ದ ಕಾರಣ ಓವರ್‌ಲೋಡ್‌ನಿಂದ ಸೇತುವೆ ಕುಸಿದಿದೆ ಎಂದು ಜಮ್ಮು ವಿಭಾಗೀಯ ಆಯುಕ್ತ ರಮೇಶ್ ಕುಮಾರ್ ತಿಳಿಸಿದ್ದಾರೆ.