ಬೆಂಗಳೂರು: ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದ ಬೆನ್ನಲ್ಲೇ ಟಿಕೆಟ್ ಆಕಾಂಕ್ಷಿಗಳ ಬಂಡಾಯ ಭುಗಿಲೆದಿದ್ದು ಈಗಾಗಲೇ ಲಕ್ಷ್ಮಿ ಸವದಿಯಂತಹ ಘಟಾನುಘಟಿ ನಾಯಕರು ಬಿಜೆಪಿ ತೊರೆದಿದ್ದು,ಇದೀಗ ಹುಬ್ಬಳ್ಳಿ ಧಾರವಾಡದ ಲಿಂಗಾಯತ ಸಮುದಾಯದ ಬಿಜೆಪಿಯ ಪ್ರಬಲ ನಾಯಕ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಹಾವೇರಿ ಶಾಸಕ ನೆಹರು ಓಲೇಕಾರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದು ಮಾತ್ರವಲ್ಲದೇ ಭಾನುವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸುವುದಾಗಿ ಹೇಳಿದ್ದಾರೆ.
ಜಗದೀಶ್ ಶೆಟ್ಟರ್ ಮನವೊಲಿಸಲು ಶನಿವಾರ ಸಂಜೆ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರದಾನ್,ಪ್ರಹ್ಲಾದ್ ಜೋಷಿ, ಸಿಎಂ ಬೊಮ್ಮಾಯಿಯವರು ಶೆಟ್ಟರ್ ನಿವಾಸಕ್ಕೆ ಆಗಮಿಸಿದ್ದರೂ ಟಿಕೆಟ್ ಸಿಗುವ ಕುರಿತು ಭರವಸೆ ಸಿಗದ ಹಿನ್ನೆಲೆಯಲ್ಲಿ ರಾಜೀನಾಮೆಗೆ ನಿರ್ಧರಿಸಿದ್ದಾರೆ.
ಇತ್ತ ಹಾವೇರಿ ಶಾಸಕ ನೆಹರು ಓಲೇಕಾರ್ ಕೂಡ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡು ಶಾಸಕ ಸ್ಥಾನ ಹಾಗೂ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಈಗಾಗಲೇ ಅವರು ಜೆಡಿಎಸ್ ನಾಯಕರ ಜತೆ ಮಾತುಕತೆ ನಡೆಸಿದ್ದು ಬಹುತೇಕ ಭಾನುವಾರ ಜೆಡಿ ಎಸ್ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದುಬಂದಿದೆ
ತುಂತುರು ನೀರಾವರಿ ಯೋಜನೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ 1,500 ಕೋಟಿ ಹಣ ಕೊಳ್ಳೆ ಹೊಡೆದ್ದಾರೆ,ರೈತರಿಗೆ ಮೋಸ ಮಾಡಿದ್ದಾರೆ ಎಂದು ಓಲೇಕಾರ್ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದರು.
ಒಟ್ಟಿನಲ್ಲಿ ಬಿಜೆಪಿಯ ಪ್ರಬಲ ನಾಯಕರು ಪಕ್ಷ ತೊರೆಯುತ್ತಿರುವುದು ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ದುಬಾರಿಯಾಗಿ ಪರಿಣಮಿಸುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ