Share this news

ಮಂಗಳೂರು: ಕಾಲು ಕುಂಟುತ್ತಾ ಪೊಲೀಸ್ ಭದ್ರತೆಯಲ್ಲಿ ಹೋಗುತ್ತಿರುವ ಈತ ಸಾಧಾರಣ ವ್ಯಕ್ತಿಯೇನಲ್ಲ. ಊಸರವಳ್ಳಿ ತರ ಆಡುವ ಈತ ಖತರ್ನಾಕ್ ಅಂತರ್‌ ಜಿಲ್ಲಾ ಮನೆ ಕಳ್ಳತನದ ಆರೋಪಿ ಸಿದ್ದರಾಜು ಅಲಿಯಾಸ್ ಮೂರ್ತಿ. ಮೂಲತಃ ಮೈಸೂರು ನಗರದ ಮೇಟಗಳ್ಳಿ ಮೂಲದವನಾದ ಇವನು ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದ. ದುಡಿದು ತಿನ್ನುವ ಬದಲು ಮನೆ ಕಳ್ಳತನ ಮಾಡಿ ಖತರ್ನಾಕ್ ಐಡಿಯಾಗಳಿಂದ ತಲೆಮರೆಸಿಕೊಂಡು ಆರಾಮದಾಯಕ ಜೀವನ ಮಾಡುತ್ತಿದ್ದ. ಹೀಗೆ ಮಂಗಳೂರಿನಲ್ಲಿ ಮನೆ ಕಳ್ಳತನ ಮಾಡಲು ಬಂದು ಪೊಲೀಸರ ಕೈಗೆ ಅತಿಥಿಯಾಗಿದ್ದಾನೆ.

 ಕಾವೂರಿನಲ್ಲಿ ನಡೆದ ಮನೆಕಳ್ಳತನ ಪ್ರಕರಣದ ಬೆನ್ನತ್ತಿದ್ದ ಮಂಗಳೂರು ಸಿಸಿಬಿ ಪೊಲೀಸರು ಬೆಂಗಳೂರು ಹೊರವಲಯದಲ್ಲಿ ಈತನನ್ನು ಅರೆಸ್ಟ್ ಮಾಡಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಕೇವಲ ಮಂಗಳೂರು ಮಾತ್ರವಲ್ಲದೇ ಉಡುಪಿ ಜಿಲ್ಲೆಯ ಮಣಿಪಾಲ, ಕಾರ್ಕಳ, ಆಗುಂಬೆ, ತೀರ್ಥಹಳ್ಳಿ, ಮಾಲೂರು, ಕಾರ್ಗಲ್ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಹರಿಹರ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಮಾಡಿ ಚಿನ್ನಾಭರಣ ಲೂಟಿ ಮಾಡಿದ್ದ ಎಂದು ಗೊತ್ತಾಗಿದೆ. ಸದ್ಯ ಆರೋಪಿಯಿಂದ ಹದಿನೈದು ಲಕ್ಷ ಮೌಲ್ಯದ 270 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಈ ಖತರ್ನಾಕ್ ಖದೀಮ 2005ರಲ್ಲಿ ಮೈಸೂರಿನಲ್ಲಿ ನಡೆದ ಮಹಿಳೆಯೊಬ್ಬರ ಕೊಲೆ ಪ್ರಕರಣದ ಆರೋಪಿಯಾಗಿದ್ದ. ಈ ಪ್ರಕರಣದಲ್ಲಿ ಬಂಧನಕ್ಕೊಳಕ್ಕಾಗಿ ನ್ಯಾಯಾಂಗ ಬಂಧನದಲ್ಲಿದ್ದಾಗ 2006ನೇ ಇಸವಿಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಮಂಡ್ಯ ಜಿಲ್ಲೆಯ ಮದ್ದೂರು ಎಂಬಲ್ಲಿ ಪೊಲೀಸರ ಕಸ್ಟಡಿಯಿಂದ ತಪ್ಪಿಸಿಕೊಂಡು ಎಸ್ಕೇಪ್ ಆಗಿದ್ದ. ಆ ಬಳಿಕದಿಂದ ಈತನ ಪತ್ತೆಗಾಗಿ ಪೊಲೀಸರು ಹುಡುಕಾಡಿದ್ರೂ ಸಿಕ್ಕರಲಿಲ್ಲ. ಆ ಬಳಿಕ ಉಡುಪಿಯ ಕೋಟ ಹಾಗೂ ಹಾಸನದ ಚನ್ನರಾಯಪಟ್ಟಣದಲ್ಲಿ ಮನೆ ಕಳ್ಳತನ ಪ್ರಕರಣದಲ್ಲಿ ಅರೆಸ್ಟ್ ಆದಾಗ ಬೇರೆ ಹೆಸರು, ವಿಳಾಸ ಹೇಳಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ.

ಆದರೆಈ ಬಾರಿ ಮಂಗಳೂರಿನಲ್ಲಿ ನಡೆದ ಮನೆ ಕಳ್ಳತನ ಪ್ರಕರಣದಲ್ಲಿ ಖಾಕಿ ಕೈಗೆ ಸಿಕ್ಕಿಬಿದ್ದಾಗ ತನ್ನ ಜಾತಕವನ್ನೆಲ್ಲ ಕಕ್ಕಿದ್ದಾನೆ. ಈ ಮೂಲಕ 17 ವರ್ಷದಿಂದ ಎಸ್ಕೇಪ್ ಆಗಿದ್ದ ಅಸಾಮಿ ಪೊಲೀಸರ ಕೈಯಲ್ಲಿ ಲಾಕ್ ಆಗಿದ್ದಾನೆ. ಈತನ ಮೇಲೆ ಮನೆಕಳ್ಳತನ, ಕೊಲೆ ಪ್ರಕರಣ ಮಾತ್ರವಲ್ಲದೆ ಅತ್ಯಚಾರ, ಕೊಲೆ ಯತ್ನ ಸೇರಿದಂತೆ ಒಟ್ಟು 30 ಪ್ರಕರಣಗಳು ದಾಖಲಾಗಿದೆ. ಈತನ ಮೇಲೆ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ಸಹ ತೆರೆಯಲಾಗಿದೆ. ಒಟ್ಟಿನಲ್ಲಿ ಖತರ್ನಾಕ್ ಖದೀಮನನ್ನು ಮಂಗಳೂರು ಸಿಸಿಬಿ ಪೊಲೀಸರು ಹೆಡೆಮುರಿಕಟ್ಟಿದ್ದು, ಪೊಲೀಸ್​ ತಂಡಕ್ಕೆ ನಗರ ಪೊಲೀಸ್ ಕಮೀಷನರ್ ಹತ್ತು ಸಾವಿರ ನಗದು ಬಹುಮಾನ ಘೋಷಿಸಿ ಪ್ರಶಂಸಿದ್ದಾರೆ.

Leave a Reply

Your email address will not be published. Required fields are marked *