ಕಾರ್ಕಳ: ಹಿಂದುತ್ವದ ಸಿದ್ದಾಂತದ ಅಡಿಯಲ್ಲಿ 15 ವರ್ಷ ಆಡಳಿತ ನಡೆಸಿದ ಕಾರ್ಕಳ ಶಾಸಕರು ಅಧಿಕಾರ ಅನುಭವಿಸಲು ಕಾರಣರಾದ ದೇವದುರ್ಲಭ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ದರ್ಪ ಬೆದರಿಕೆ ಹಾಕುವ ಮೂಲಕ ಅವರ ಧ್ವನಿ ಅಡಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಶ್ರೀರಾಮ ಸೇವೆ ಮುಖಂಡ ಕಾರ್ಕಳ ಪಕ್ಷೇತರ ಅಭ್ಯರ್ಥಿ ಪ್ರಮೋದ್ ಮುತಾಲಿಕ್ ಆರೋಪಿಸಿದರು.
ಅವರು ಕಾರ್ಕಳದ ಬಜಗೋಳಿಯಲ್ಲಿ ಭಾನುವಾರ ನಡೆದ ಬಹಿರಂಗ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.ಕಾರ್ಕಳವು ಗೋಕಳ್ಳತನ ಪ್ರಕರಣದಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ, ಗೋವು ರಕ್ಷಣೆ, ಲವ್ ಜಿಹಾದ್ ವಿರುದ್ಧ ಹೋರಾಟ ಮಾಡಿರುವ ಹಿಂದೂ ಕಾರ್ಯಕರ್ತರ ಮೇಲೆ ರೌಡಿ ಶೀಟರ್, ಗೂಂಡಾ ಕಾಯಿದೆ ಹಾಕಲಾಗಿದೆ, ಆದರೆ ನೀವು 15 ವರ್ಷಗಳಿಂದ ಕಾರ್ಕಳ ಶಾಸಕನಾಗಿ ಕಾರ್ಯಕರ್ತರ ಕೇಸ್ ಯಾಕೆ ವಾಪಾಸು ಪಡೆಯಲು ಸಾಧ್ಯವಾಗಲಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿ ಎಂದು ಸವಾಲೆಸೆದರು.
ಗಂಗೊಳ್ಳಿಯಲ್ಲಿ ಮಹಿಳಾ ಮೀನುಗಾರರಿಗೆ ಬಹಿಷ್ಕಾರ ಹಾಕಿದ್ದ ಹಾಗೂ ಪಿಎಫ್ ಐ ಸಂಘಟನೆ ಬೆಂಬಲಕ್ಕೆ ನಿಂತಿದ್ದ ಕೋಲ್ವ ಇಬ್ರಾಹಿಂ ಗೆ ನೀವು ಕುಟುಂಬ ಸಹಿತ ಕೇಕ್ ತಿನ್ನಿಸಿದ್ದೀರಿ, ಇದೇನಾ ನಿಮ್ಮ ಅಸಲಿ ಹಿಂದುತ್ವ ಎಂದು ಪ್ರಶ್ನಿಸಿದ ಮುತಾಲಿಕ್, ರಾಮ ಮಂದಿರ ನಿರ್ಮಾಣ ಮಾಡುವುದು, ಕೇಸರಿ ಶಾಲು ಧರಿಸಿ ಓಡಾಡುವುದು ಹಿಂದುತ್ವ ಅಲ್ಲಾ ಎನ್ನುವ ಮೂಲಕ ಕೋಟ್ಯಾಂತರ ಹಿಂದೂ ಕಾರ್ಯಕರ್ತರಿಗೆ ದ್ರೋಹ ಎಸಗಿದ್ದೀರಿ ಎಂದು ಸುನಿಲ್ ಕುಮಾರ್ ವಿರುದ್ಧ ತೀವೃ ವಾಗ್ದಾಳಿ ನಡೆಸಿದರು.
ಹಿಂದುತ್ವ ಹೆಸರಿನಲ್ಲಿ ಕಾರ್ಕಳದಲ್ಲಿ ಬೇನಾಮಿ ಆಸ್ತಿ ಸಂಪಾದನೆ ಮಾಡಿ,ಸರ್ಕಾರಿ ಜಾಗವನ್ನು ಕಬಳಿಸಿ ಭ್ರಷ್ಟಾಚಾರ ಮಾಡಿದ್ದೀರಿ, ನಿಮ್ಮ ಎಲ್ಲಾ ಅಕ್ರಮಗಳನ್ನು ದಾಖಲೆಸಹಿತ ಬಹಿರಂಗಪಡಿಸಿ ಲೋಕಾಯುಕ್ತಕ್ಕೆ ದೂರು ನೀಡುವುದಾಗಿ ಮುತಾಲಿಕ್ ಗುಡುಗಿದ್ದಾರೆ.ಅಭಿವೃದ್ಧಿ ಸಹಿಸದೇ ಭ್ರಷ್ಟಾಚಾರ ಆರೋಪ ಮಾಡುತ್ತಿದ್ದಾರೆ ಎನ್ನುವ ನೀವು ಒಂದೇ ವೇದಿಕೆಯಲ್ಲಿ ಮುಕ್ತ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದರು.
ನಮ್ಮ ಹೋರಾಟ ಕಾರ್ಕಳದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಕಾರ್ಯಕರ್ತರ ಕಡೆಗಣನೆ, ಡೋಂಗಿ ಹಿಂದುತ್ವದ ವಿರುದ್ದವಾಗಿದೆ. ಆದ್ದರಿಂದ ಯಾವುದೇ ಭ್ರಷ್ಟಾಚಾರದ ಇಲ್ಲದೇ ನೈಜ ಹಿಂದುತ್ವಕ್ಕಾಗಿ 109ಕೇಸ್ ಹಾಕಿಸಿಕೊಂಡು ಹೋರಾಟ ನಡೆಸುತ್ತಿರುವ ನನಗೆ ಒಂದು ಅವಕಾಶ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ನ್ಯಾಯವಾದಿ ಹರೀಶ್ ಅಧಿಕಾರಿ ಕಾರ್ಕಳದಲ್ಲಿ ಕುಡಿಯುವ ನೀರು ಹಾಗೂ ಕೃಷಿ ಬಳಕೆಗೆ 250 ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಲಾಗಿದೆ ಎನ್ನುತ್ತೀರಿ ನಿಮ್ಮ ಅಣೆಕಟ್ಟಿಲ್ಲ ಒಂದು ಹನಿ ನೀರಿಲ್ಲ,ಜನರ ಹಣ ಕೊಳ್ಳೆ ಹೊಡೆದ ನಿಮಗೆ ಕಾರ್ಕಳದ ಪ್ರಜ್ಞಾವಂತ ಮತದಾರರು ಉತ್ತರಿಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ಚಿತ್ತರಂಜನ್ ಶೆಟ್ಟಿ, ವಿಖ್ಯಾತ್ ರಾವ್, ವಿನಯಾ ರಾನಡೆ, ಗಂಗಾಧರ ಕುಲಕರ್ಣಿ,ದಿವ್ಯಾ ನಾಯಕ್, ರಾಘವ ನಾಯ್ಕ್, ವಾಸುದೇವ ಶೆಟ್ಟಿಗಾರ್, ಲಕ್ಷ್ಮೀನಾರಾಯಣ ಮಲ್ಯ ಮುಂತಾದವರು ಉಪಸ್ಥಿತರಿದ್ದರು.