ಕಾರ್ಕಳ: ಕಾಂಗ್ರೆಸ್ ಮಾಜಿ ಶಾಸಕ ದಿ.ಗೋಪಾಲ ಭಂಡಾರಿಯವರ ನಿಧನದ ಬಳಿಕ ಕಾರ್ಕಳದಲ್ಲಿ ಕಾಂಗ್ರೆಸ್ ಸಂಪೂರ್ಣ ಅಸ್ತಿತ್ವವನ್ನೇ ಕಳೆದುಕೊಂಡಿದೆ ಹಾಗೂ ಕಾರ್ಕಳ ಬಿಜೆಪಿ ಶಾಸಕರು ಕಳೆದ 5 ವರ್ಷಗಳಿಂದ ಭ್ರಷ್ಟಾಚಾರ ಮಾಡಿರುವುದೇ ಅವರ ಸಾಧನೆಯಾಗಿದೆ ಎಂದು ಹಿಂದೂಪರ ಹೋರಾಟಗಾರ ಪಕ್ಷೇತರ ಅಭ್ಯರ್ಥಿ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.
ಅವರು ಕಾರ್ಕಳ ಪರಪು ಬಳಿಯ ಪಾಂಚಜನ್ಯ ಚುನಾವಣಾ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕಾಂಗ್ರೆಸ್ ಉಮೇದುವಾರಿಕೆಗೆ ಅರ್ಜಿ ಹಾಕದವರಿಗೆ ಟಿಕೆಟ್ ಸಿಕ್ಕಿದೆ,ಕಾಂಗ್ರೆಸ್ ಪಕ್ಷ ಕಳೆದ 5 ವರ್ಷಗಳಿಂದ ಬಿಜೆಪಿಯ ಭ್ರಷ್ಟಾಚಾರವನ್ನು ಬಯಲಿಗೆಳೆಯಲು ವಿಫಲವಾಗಿದೆ.ಕಾಂಗ್ರೆಸ್ ಪಕ್ಷದ ಬಿನ್ನಮತದ ಪರಿಣಾಮ ಸಾಕಷ್ಟು ಕಾರ್ಯಕರ್ತರು ಭ್ರಷ್ಟಾಚಾರ ವಿರೋಧಪರ ನಮ್ಮ ಹೋರಾಟಕ್ಕೆ ಕೈಜೋಡಿಸಿದ್ದಾರೆ ಎಂದರು. ಕಾರ್ಕಳದಲ್ಲಿನ ರೈತರ ಕೃಷಿ ಜಮಿನಿಗೆ ಶಾಶ್ವತ ನೀರಾವರಿ ವ್ಯವಸ್ಥೆ ಹಾಗೂ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದರು.
ಹಿಂದುತ್ವದ ಸಿದ್ದಾಂತದ ಅಡಿಯಲ್ಲಿ ಅಧಿಕಾರಕ್ಕೆ ಬಂದವರು ಗೋಕಳ್ಳತನದ ವಿರುದ್ದವಾಗಿ ಹೋರಾಟ ಮಾಡಿದ ಕಾರ್ಯಕರ್ತರ ಮೇಲೆ ರೌಡಿಶೀಟರ್,ಗೂಂಡಾ ಕಾಯಿದೆ ಹಾಕ್ತಾರೆ, ಆದರೆ ಸಿದ್ದರಾಮಯ್ಯ ಸರ್ಕಾರ ಪಿಎಫ್‌ಐ ಕಾರ್ಯಕರ್ತರ ಮೇಲಿನ ಕೇಸ್ ವಾಪಾಸು ಪಡೆದಿದೆ, ಬಿಜೆಪಿ ಸರ್ಕಾರಕ್ಕೆ ದೇಶಭಕ್ತ ಹಿಂದೂಕಾರ್ಯಕರ್ತರ ಕೇಸ ಹಿಂಪಡೆಯಲು ಯಾಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು. ಕಾರ್ಕಳದ ಪರ್ಪಲೆಗಿರಿಯ ಕಲ್ಕುಡ ದೈವದ ಸ್ಥಾನದ ಅಭಿವೃದ್ಧಿಯನ್ನು ಕಾರ್ಕಳದ ಶಾಸಕರು ಮರೆತಿದ್ದಾರೆ, ಆದರೆ ತುಳುನಾಡಿನ ಪ್ರಧಾನ ಆರಾಧ್ಯ ದೈವದ ಪರ್ಪಲೆಗಿರಿಯನ್ನು ಅಭಿವೃದ್ಧಿಪಡಿಸಲಾಗುವುದೆಂದರು.
ಸುನಿಲ್ ಕುಮಾರ್ ಅವರು ತನ್ನ 5 ವರ್ಷದ ಸಾಧನೆಯ ರಿಪೋರ್ಟ್ ಕಾರ್ಡ್ ಬಿಡುಗಡೆಗೊಳಿಸಿದ್ದು ಇದಕ್ಕೆ ಪ್ರತಿಯಾಗಿ ಏಪ್ರಿಲ್ 30ರಂದು ಶಾಸಕರರ ಭ್ರಷ್ಟಾಚಾರದ ಗುಳುಂ ಕಾರ್ಡ್ ಬಿಡುಗಡೆಗೊಳಿಸಲಾಗುವುದು ಜತೆಗೆ ಅಂದು ಎರಡು ಪ್ರಮುಖ ಭ್ರಷ್ಟಾಚಾರದ ದಾಖಲೆಗಳನ್ನು ಬಿಡುಗಡೆಗೊಳಿಸುವುದಾಗಿ ಹೇಳಿದರು. ಸುಳ್ಯದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಕೊಲೆಗಡುಕ ಪುತ್ತೂರಿನಿಂದ ಎಸ್‌ಡಿಪಿಐ ಪಕ್ಷದಿಂದ ಸ್ಪರ್ಧೆಗೆ ಇಳಿಸಿದ್ದಾರೆ,ಕೊಲೆ ಆರೋಪಿಯನ್ನು ಚುನಾವಣೆಗೆ ಸ್ಪರ್ಧಿಸಲು ಬಿಟ್ಟಿರುವುದು ಚುನಾವಣಾ ಆಯೋಗ ನಿರ್ಧಾರ ಸರಿಯಲ್ಲ ಎಂದರು. ಅಲ್ಲದೇ ಪಿಎಫ್‌ಐ ಜತೆಗೆ ದೇಶವಿರೋಧಿ ಚಟುವಟಿಕೆ ನಡೆಸುತ್ತಿರುವ ಎಸ್‌ಡಿಪಿಐಯನ್ನು ನಿಷೇಧಿಸಬೇಕೆಂದು ಮುತಾಲಿಕ್ ಒತ್ತಾಯಿಸಿದರು.
ಕಾರ್ಕಳದಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಸಮಬಲದ ಹೋರಾಟದಲ್ಲಿ ನೀವು ಗೆಲ್ಲಲು ಸಾಧ್ಯವೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಮುತಾಲಿಕ್, ಭ್ರಷ್ಟಾಚಾರದ ವಿರುದ್ಧ ಹಾಗೂ ಹಿಂದುತ್ವದ ರಕ್ಷಣೆಗಾಗಿ ನನ್ನ ಹೋರಾಟವಾಗಿದ್ದು, ನನ್ನ ಗೆಲುವು ನಿಶ್ಚಿತ ಎಂದ ಅವರು ಕಾರ್ಕಳದಿಂದ ಒಂದೊಮ್ಮೆ ಸೋತರೆ ಕಾರ್ಕಳದಲ್ಲೇ ಇದ್ದುಕೊಂಡು ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಟ ನಡೆಸಿ ಜನರ ಸಮಸ್ಯೆಗಳಿಗೆ ಧ್ವನಿಯಾಗುತ್ತೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ನ್ಯಾಯವಾದಿ ಹರೀಶ್ ಅಧಿಕಾರಿ, ಚಿತ್ತರಂಜನ್ ಶೆಟ್ಟಿ, ಆನಂದ ಶೆಟ್ಟಿ ಅಡ್ಯಾರು, ದಿವ್ಯಾ ನಾಯಕ್ ಉಪಸ್ಥಿತರಿದ್ದರು.