ಕೋಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ನಡೆದ ರಾಮನವಮಿ ಹಿಂಸಾಚಾರದ ಬಗ್ಗೆ ಕೇಂದ್ರೀಯ ಸಂಸ್ಥೆ ಎನ್‌ಐಎ ತನಿಖೆಗೆ ಕೋಲ್ಕತ್ತಾ ಹೈಕೋರ್ಟ್ ಆದೇಶಿಸಿದೆ
ಪಶ್ಚಿಮ ಬಂಗಾಳದ ಹೌರಾ ನಗರದಲ್ಲಿ ರಾಮನವಮಿ ಮೆರವಣಿಗೆ ನಡೆಸುವಾಗ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ಈ ವೇಳೆ ಹಲವಾರು ವಾಹನಗಳಿಗೆ ಬೆಂಕಿ ಹಚ್ಚಿ ಅಂಗಡಿಗಳನ್ನು ಧ್ವಂಸ ಮಾಡಲಾಗಿತ್ತು. ರಾಮನವಮಿ ಮೆರವಣಿಗೆ ಕಾಜಿಪಾರಾ ಪ್ರದೇಶವನ್ನು ದಾಟುತ್ತಿದ್ದಾಗ ಈ ಹಿಂಸಾಚಾರ ಸಂಭವಿಸಿತ್ತು. ಹಿಂಸಾಚಾರದ ಸಮಯದಲ್ಲಿ ಕೆಲವು ಪೊಲೀಸ್ ವಾಹನಗಳು ಸೇರಿದಂತೆ ಹಲವಾರು ಕಾರುಗಳು ಹಾನಿಗೊಳಗಾಗಿವೆ. ಗುಂಪನ್ನು ಚದುರಿಸಲು ಭದ್ರತಾ ಸಿಬ್ಬಂದಿ ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಿದ್ದರು.
ಈ ಪ್ರಕರಣದ ಹಿಂದೆ ಭಯೋತ್ಪಾದಕರ ಕೈವಾಡವಿದೆ. ಹೀಗಾಗಿ ಎನ್ಐಎ ತನಿಖೆಗೆ ನೀಡಬೇಕು ಎಂದು ಹೈಕೋರ್ಟ್‌ಗೆ ಬಿಜೆಪಿ ನಾಯಕ ಸುವೇಂಧು ಅಧಿಕಾರಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ಕೋರ್ಟ್, ಪ್ರಕರಣದ ಗಂಭೀರತ ಮನಗಂಡು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿದೆ.
ಪಶ್ಚಿಮ ಬಂಗಾಳ ಪೊಲೀಸರು ಎಲ್ಲಾ ಮಾಹಿತಿಯನ್ನು ಎನ್ಐಎ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಬೇಕು. ಈ ಕುರಿತ ಸಿಸಿಟಿವಿ ದೃಶ್ಯ ಸೇರಿದಂತೆ ಕಲೆ ಹಾಕಿರುವ ದಾಖಲೆಗಳನ್ನು ಎನ್‌ಐಎಗೆ ವಹಿಸಬೇಕು ಎಂದು ಕೋರ್ಟ್ ಸೂಚಸಿದೆ.ಈ ಘಟನೆ ಬೆನ್ನಲ್ಲೇ ಬಂಗಾಳ ಬಿಜೆಪಿ ನಾಯಕರು ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಮಮತಾ ಬ್ಯಾನರ್ಜಿ ಪ್ರಚೋದಿತ ಹೇಳಿಕೆಯಿಂದ ಗಲಭೆ ಸೃಷ್ಟಿಯಾಗಿದೆ ಎಂದಿತ್ತು. ಇದಕ್ಕೆ ಪ್ರತಿಯಾಗಿ ಮಮತಾ ಬ್ಯಾನರ್ಜಿ, ಇದು ಬಿಜೆಪಿ ಹಾಗೂ ಬಜರಂಗದಳದ ಕೃತ್ಯ ಎಂದು ಆರೋಪಿಸಿದ್ದರು.
ಹಿಂಸಾಚಾರಗಳಿಗೆ ಬಿಜೆಪಿಯೇ ನೇರ ಕಾರಣ’ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ‘ಹೌರಾದಲ್ಲಿ ನಡೆದಿರುವ ಘಟನೆ ದುರದೃಷ್ಟಕರವಾದುದು. ಆದರೆ ಈ ಹಿಂಸಾಚಾರದ ಹಿಂದೆ ಹಿಂದೂಗಳಾಗಲ್ಲ. ಮುಸ್ಲಿಮರಾಗಲೀ ಇಲ್ಲ ಇದರ ಹಿಂದೆ ಇರುವುದು ಬಿಜೆಪಿ’ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಆದರೆ ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ‘ಇದರಲ್ಲಿ ಬಿಜೆಪಿಯ ಯಾವುದೇ ಕೈವಾಡವಿಲ್ಲ. ಈ ಪ್ರಕರಣದ ಕುರಿತಾಗಿ ಎನ್‌ಐಎ ತನಿಖೆ ನಡೆಸಲಿ’ ಎಂದು ಹೇಳಿದೆ.