ತುಮಕೂರು: ಜಿಲ್ಲೆಯ ಕೊರಟಗೆರೆ ಕ್ಷೇತ್ರದಲ್ಲಿ ದುಷ್ಕರ್ಮಿಗಳಿಂದ ಡಾ.ಜಿ ಪರಮೇಶ್ವರ್ ಮೇಲೆ ಕಲ್ಲೆಸೆತ ಪ್ರಕರಣ ಸಂಬಂಧಿಸಿ ತಪ್ಪಿತಸ್ಥರನ್ನು ಬಂಧಿಸುವಂತೆ ಕಾರ್ಯಕರ್ತರು ಆಗ್ರಹಿಸಿದ್ದಾರೆ
ಹೌದು, ರಾಜ್ಯದ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿರುವ ಕೊರಟಗೆರೆ ಕ್ಷೇತ್ರದಲ್ಲಿ ನಿನ್ನೆ(ಏ.28) ಪ್ರಚಾರ ನಿರತ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಮೇಲೆ ಕಿಡಿಗೇಡಿಗಳು ಕಲ್ಲೆಸೆದಿದ್ದು, ಅವರು ಗಾಯಗೊಂಡಿದ್ದಾರೆ.
ಮುಂಜಾನೆಯಿಂದಲೂ ಕ್ಷೇತ್ರದಲ್ಲಿ ತಮ್ಮ ಅಪಾರ ಕಾರ್ಯಕರ್ತರೊಟ್ಟಿಗೆ ಪ್ರಚಾರ ನಡೆಸುತ್ತಿದ್ದ ಪರಮೇಶ್ವರ್, ಮಧ್ಯಾಹ್ನದ ವೇಳೆಗೆ ಕೊರಟಗೆರೆ ತಾಲ್ಲೂಕಿನ ಭೈರೇನಹಳ್ಳಿಗೆ ಆಗಮಿಸಿದ್ದರು. ಈ ವೇಳೆ ಜೆಸಿಬಿ ಮೂಲಕ ಹೂ ಸುರಿಯಲು, ಕ್ರೇನ್ ಮೂಲಕ ಬೃಹತ್ ಹೂವಿನ ಹಾರ ಹಾಕಲು ಅಣಿಯಾಗಿದ್ದ ಕಾರ್ಯಕರ್ತರು, ಪರಮೇಶ್ವರ್ ಆಗಮಿಸಿದ ಕೂಡಲೇ ಅವರನ್ನ ಹೆಗಲ ಮೇಲೆ ಎತ್ತಿ ಕುಣಿಸಿದ್ದಾರೆ. ಹೂ ಸುರಿಯೋ ವೇಳೆಗೆ ದಿಢೀರನೇ ಕಲ್ಲೊಂದು ಪರಮೇಶ್ವರ್ ತಲೆಗೆ ತಾಗಿ ರಕ್ತಸ್ರಾವವಾಗಿತ್ತು.
ಕೂಡಲೇ ಪರಮೇಶ್ವರ್ ಅವರನ್ನ ಕೆಳಗಿಳಿಸಿದ ಕಾರ್ಯಕರ್ತರು, ಹತ್ತಿರದ ಅಕ್ಕಿರಾಂಪುರ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ತುಮಕೂರಿನ ಸಿದ್ದಾರ್ಥನಗರದ ತಮ್ಮ ನಿವಾಸಕ್ಕೆ ರವಾನಿಸಿ ವೈದ್ಯರ ತಂಡ ಚಿಕಿತ್ಸೆ ನೀಡಿದೆ.