ಪುಣೆ: ಪಾಕಿಸ್ತಾನದ ಗುಪ್ತಚರ ಏಜೆಂಟ್ಗೆ ರಹಸ್ಯ ಮಾಹಿತಿಯನ್ನು ನೀಡುತ್ತಿದ್ದರು ಎಂಬ ಕಾರಣಕ್ಕೆ ಡಿಆರ್ಡಿಒದ ವಿಜ್ಞಾನಿಯೊಬ್ಬರನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ಬುಧವಾರ ಬಂಧಿಸಿದೆ.
ಈತ ಪಾಕಿಸ್ತಾನದ ಏಜೆಂಟ್ ಜೊತೆಗೆ ವಾಟ್ಸಾಪ್ ಮತ್ತು ವಿಡಿಯೋ ಚಾಟ್ ಮೂಲಕ ಸಂಪರ್ಕದಲ್ಲಿದ್ದ, ಇದೊಂದು ಹನಿಟ್ರಾಪ್ ಪ್ರಕರಣವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಂಧನಕ್ಕೊಳಪಟ್ಟವ್ಯಕ್ತಿ ಡಿಆರ್ಡಿಒದಲ್ಲಿ ಹಿರಿಯ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ದೇಶದ ಭದ್ರತೆಗಾಗಿ ಕೆಲಸ ಮಾಡುವ ಸಂಸ್ಥೆಯೊಂದರ ರಹಸ್ಯಗಳು ಶತ್ರು ದೇಶಕ್ಕೆ ದೊರೆಯುವುದು ಭದ್ರತೆಗೆ ಸಂಬಂಧಿಸಿದಂತೆ ಬಹುದೊಡ್ಡ ಅಪಾಯವಾಗಲಿದೆ ಎಂದು ಅವರು ಹೇಳಿದ್ದಾರೆ.
ಭಾರತೀಯ ಸೇನಾ ನೆಲೆಗಳ ಕುರಿತು ಫೋಟೋ ಸಹಿತ ಮಾಹಿತಿ ನೀಡಿದ್ದ ರಾಜಸ್ಥಾನ ಮೂಲದ ತನ್ನ ‘ಗೂಢಚಾರಿ’ ಜಿನೇಂದ್ರ ಸಿಂಗ್ನಿಗೆ ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸಿ (ಐಎಸ್ಐ) ನೀಡಿದ್ದು ಕೇವಲ ಮೂರು ಸಾವಿರ ರು. ಮಾತ್ರ ಎಂಬ ಕುತೂಹಲಕಾರಿ ಸಂಗತಿ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ತನಿಖೆಯಲ್ಲಿ ಬಯಲಾಗಿದೆ.
ತನ್ನ ಹನಿಟ್ರ್ಯಾಪ್ ಬಲೆಗೆ ಬಿದ್ದ ಜಿನೇಂದ್ರ ಸಿಂಗ್ನನ್ನು ಭಾರತೀಯ ಸೇನಾಧಿಕಾರಿಯೆಂದೇ ಆರಂಭದಲ್ಲಿ ಐಎಸ್ಐ ಭಾವಿಸಿದೆ. ಹೀಗಾಗಿ ಆತನಿಂದ ಭಾರಿ ಮಾಹಿತಿ ಸಿಗುವ ನಿರೀಕ್ಷೆ ಹೊಂದಿದ್ದ ಐಎಸ್ಐ ಏಜೆಂಟ್ಗಳು, ಜಿನೇಂದ್ರನಿಗೆ ಆತನ ‘ಫೇಸ್ಬುಕ್ ಸುಂದರಿ’ ಮೂಲಕ ಹಣದಾಸೆ ತೋರಿಸಿ ಪುಸಲಾಯಿಸಿದ್ದಾರೆ. ಅಂತೆಯೇ ರಾಜಸ್ಥಾನದಲ್ಲಿರುವ ಸೇನಾ ನೆಲೆಯೊಂದರ ಭಾವಚಿತ್ರವನ್ನು ‘ಫೇಸ್ಬುಕ್ ಸುಂದರಿ’ ಜತೆ ಹಂಚಿಕೊಂಡಿದ್ದಕ್ಕೆ ಪ್ರತಿಯಾಗಿ ಆತನ ಖಾತೆಗೆ ಹಣ ಜಮೆಯಾಗಿದೆ ಎಂದು ಮೂಲಗಳು ಹೇಳಿವೆ.
ಈ ಭಾವಚಿತ್ರಗಳು ರವಾನೆಯಾದ ಬಳಿಕ ಸೇನಾ ನೆಲೆಯೊಳಗಿನ ವ್ಯವಸ್ಥೆ ಬಗ್ಗೆ ಐಎಸ್ಐ ಮಾಹಿತಿ ಕೋರಿದೆ. ಪದೇ ಪದೇ ಕೇಳಿದರೂ ಜಿನೇಂದ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದರಿಂದ ಅನುಮಾನಗೊಂಡ ಐಎಸ್ಐ, ಜಿನೇಂದ್ರನ ಪೂರ್ವಾಪರ ವಿಚಾರಿಸಿದಾಗ ಆತನ ನಿಜ ಬಣ್ಣ ಗೊತ್ತಾಗಿದೆ. ಇದಾದ ಬಳಿಕ ಆತನೊಂದಿಗೆ ಹಣಕಾಸು ವ್ಯವಹಾರ ಮುಂದುವರೆದಿಲ್ಲ. ಬೆಂಗಳೂರು ಹಾಗೂ ರಾಜಸ್ಥಾನದ ಸೇನಾ ನೆಲೆಗಳ ಭಾವಚಿತ್ರವನ್ನು ಎರಡ್ಮೂರು ಬಾರಿ ಕಳುಹಿಸಿದರೂ ಹಣ ಮಾತ್ರ ಸಿಕ್ಕಿಲ್ಲವೆಂದು ತಿಳಿದು ಬಂದಿದೆ.
ಗೂಢಚಾರಿಕೆ ಸಂಬಂಧ ಜಿನೇಂದ್ರನನ್ನು ಪಾಕಿಸ್ತಾನದ ಕರಾಚಿಯಿಂದಲೇ ನೇರವಾಗಿ ಐಎಸ್ಐ ನಿರ್ವಹಿಸಿದೆ ಎಂಬುದಕ್ಕೆ ಹಣ ಜಮೆ ಪುರಾವೆಯಾಗಿದೆ. ಸೇನಾ ನೆಲೆಯ ಫೋಟೋ ರವಾನೆಯಾದ ಕೂಡಲೇ ಆತನ ಖಾತೆಗೆ ಹಣ ಬಂದಿದೆ. ಹೀಗಾಗಿ ಆರೋಪಿಗೆ ಪಾಕಿಸ್ತಾನ ಕರಾಚಿ ನಂಟು ಖಚಿತವಾಗಿದೆ ಎಂದು ಮೂಲಗಳು ತಿಳಿಸಿವೆ.
ಭಾರತೀಯ ಸೇನೆಯ ಕುರಿತು ಮಾಹಿತಿ ಪಡೆಯಲು ದುಷ್ಟಐಎಸ್ಐ, ಈಗ ಭಾರತೀಯ ಸೇನೆಯ ಅಧಿಕಾರಿಗಳು ಹಾಗೂ ಸೈನಿಕರಿಗೆ ಗಾಳ ಹಾಕಿದೆ. ಫೇಸ್ಬುಕ್, ಇನ್ಸ್ಟಾಗ್ರಾಂ ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ‘ಸಕ್ರಿಯ’ವಾಗಿರುವ ಸೈನಿಕರಿಗೆ ಸುಂದರ ಯುವತಿಯರ ಸೋಗಿನಲ್ಲಿ ಐಎಸ್ಐ ‘ಹನಿಟ್ರ್ಯಾಪ್’ ಮಾಡುತ್ತಿದೆ. ಇದೇ ಜೂನ್ನಲ್ಲಿ ದೆಹಲಿಯಲ್ಲಿ ಓರ್ವ ಸಿಕ್ಕಿಬಿದ್ದರೆ, ಆಂಧ್ರಪ್ರದೇಶದಲ್ಲಿ ವಾಯು ಸೇನೆಯ ಸೈನಿಕರ ಮೇಲೆ ಆರೋಪ ಕೇಳಿ ಬಂದಿದೆ. ಈ ಎರಡು ಪ್ರಕರಣಗಳು ಬಳಿಕ ಎಚ್ಚೆತ್ತ ಸೇನೆಯ ಗುಪ್ತದಳವು, ಐಎಸ್ಐ ಹೊಸೆದಿರುವ ಮೋಹದ ಬಲೆಗೆ ಬಿದ್ದಿರುವ ಸೈನಿಕರ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಜಾಲಾಡಿತು. ಆಗ ಬೆಂಗಳೂರಿನಲ್ಲಿ ನೆಲೆಸಿದ್ದ ಜಿನೇಂದ್ರನ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ.