ಕಾರ್ಕಳ: ಮುಂದಿನ ಜನವರಿ 2024ರೊಳಗೆ ರಾಮ ಮಂದಿರದ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ.ಕರ್ನಾಟಕದ ಲಕ್ಷಾಂತರ ಕರಸೇವಕರ ನೆರವಿನಿಂದ ಭವ್ಯ ರಾಮಮಂದಿರ ನಿರ್ಮಾಣವಾಗುತ್ತಿದೆ. ಈ ಮಂದಿರದ ಉದ್ಘಾಟನೆಗೆ ಕರ್ನಾಟಕದ ರಾಮಭಕ್ತರಿಗೆ ಆಮಂತ್ರಣ ನೀಡಲು ಹನುಮಭಕ್ತನಾಗಿ ಇಲ್ಲಿಗೆ ಬಂದಿದ್ದೇನೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು.
ಅವರು ಶುಕ್ರವಾರ ಕಾರ್ಕಳದಲ್ಲಿ ಬಿಜೆಪಿ ವತಿಯಿಂದ ನಡೆದ ಮೆಗಾ ರೋಡ್ ಶೋದಲ್ಲಿ ಅಭ್ಯರ್ಥಿ ಸುನಿಲ್ ಕುಮಾರ್ ಪರ ಮತಯಾಚಿಸಿ ಮಾತನಾಡಿದರು. ಕರ್ನಾಟಕದ ರಾಮಭಕ್ತರಿಗಾಗಿ ಅಯೋಧ್ಯೆಯಲ್ಲಿ ಪ್ರತ್ಯೇಕ ಗೆಸ್ಟ್ ಹೌಸ್ ನಿರ್ಮಾಣಕ್ಕೆ ನಿವೇಶನ ಖರೀದಿಸಿದ್ದು, ನಿರ್ಮಾಣ ಕಾಮಗಾರಿ ಆರಂಭಗೊಳ್ಳಲಿದೆ. ರಾಮಮಂದಿರ ನಿರ್ಮಾಣ ಕಾಮಗಾರಿ ಮೂಲಕ ಭಾರತದಲ್ಲಿ ರಾಮರಾಜ್ಯದ ಕನಸು ಈಡೇರಲಿದೆ ಎಂದರು.
ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಭಾರತ ಆಮೂಲಾಗ್ರ ಅಭಿವೃದ್ಧಿ ಸಾಧಿಸಿದೆ. ರೈಲ್ವೇ, ನೀರಾವರಿ, ಮೆಟ್ರೋ,ಐಐಟಿ, ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿನ ಅಭಿವೃದ್ಧಿ ಭಾರತದ ವಿಕಾಸಕ್ಕೆ ನಾಂದಿಹಾಡಿದೆ ಎಂದರು.ಐಟಿ ಕ್ಷೇತ್ರದಲ್ಲಿ ಕರ್ನಾಟಕ ದೇಶಕ್ಕೆ ಬಹುದೊಡ್ಡ ಕೊಡುಗೆ ನೀಡಿದೆ,ಟೀಮ್ ಇಂಡಿಯಾ ನಾಯಕ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಕಾರ್ಕಳದಲ್ಲಿ ಸುನಿಲ್ ಕುಮಾರ್ ಅವರಿಗೆ ಮತ ನೀಡುವ ಮೂಲಕ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಪರಶುರಾಮನ ನಾಡಿಗೆ ಪಾದಸ್ಪರ್ಶ ಮಾಡಿ ರಾಮ ಜನ್ಮಭೂಮಿಯಿಂದ ಹನುಮನ ಜನ್ಮಭೂಮಿಗೆ ಬಂದಿರುವುದಕ್ಕೆ ತುಂಬಾ ಸಂತೋಷವಾಗಿದೆ. ಆಂಜನೇಯನು ರಾವಣನ ಲಂಕಾ ಸಾಮ್ರಾಜ್ಯವನ್ನು ನಾಶ ಮಾಡಿದಂತೆ ಕರ್ನಾಟಕದ ಸಮಸ್ತ ದೇಶಭಕ್ತ ಮತದಾರರು ದೇಶದ್ರೋಹಿ ನಿಷೇಧಿತ ಪಿಎಫ್ಐ ಸಂಘಟನೆಗೆ ಬೆಂಬಲ ನೀಡುತ್ತಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳನ್ನು ತಿರಸ್ಕರಿಸಿ ಡಬ್ಬಲ್ ಇಂಜಿನ್ ಬಿಜೆಪಿ ಸರ್ಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕೆಂದರು.
ಯೋಗಿ ಆದಿತ್ಯನಾಥ್ ಅವರನ್ನು ನೋಡಲು ಭಾರೀ ಜನಸ್ತೋಮ ನೆರೆದಿದ್ದು, ಕಾರ್ಕಳ ನಗರವೇ ಸಂಪೂರ್ಣ ಕೇಸರಿಮಯವಾಗಿತ್ತು.
ನಗರದ ಅನಂತಶಯನ ವೃತ್ತದಿಂದ ಸ್ಟೇಟ್ ಬ್ಯಾಂಕ್ ವರೆಗೆ ಆದಿತ್ಯನಾಥ್ ರೋಡ್ ಶೋ ನಡೆಸಿದರು.
ಈ ಸಂದರ್ಭದಲ್ಲಿ ಸುನಿಲ್ ಕುಮಾರ್,ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಬಿಜೆಪಿ ಹಿರಿಯ ಮುಖಂಡರಾದ ಬೋಳ ಪ್ರಭಾಕರ ಕಾಮತ್ ಮುಂತಾದವರು ಉಪಸ್ಥಿತರಿದ್ದರು.