ಕಾರ್ಕಳ: ಖಾಸಗಿ ಸುದ್ದಿವಾಹಿನಿ ಮಾಲಕ ಮಹಿಳೆಯೊಬ್ಬರ ಫೋಟೋ ಎಡಿಟ್ ಮಾಡಿ ಪ್ರಸಾರ ಮಾಡಿ ಮಾನಹಾನಿ ಮಾಡಿದ್ದಾರೆ ಎಂದು ಆರೋಪಿಸಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಂಗ್ರೆಸ್ ಬೆಂಬಲಿತ ಕೆಲವು ವ್ಯಕ್ತಿಗಳು ಮತ್ತು ಇತರರು ಸೇರಿ ಕಾರ್ಕಳದ ವಿವಾಹಿತ ಮಹಿಳೆ ರಮಿತಾ ಎಂಬವರ ಹಳೆಯ ಫೋಟೋವನ್ನು ಎಡಿಟ್ ಮಾಡಿ ಶೀಘ್ರದಲ್ಲೇ ವೀಡಿಯೋ ಪ್ರಸಾರ ಎಂದು ಹೇಳಿ ವಾಟ್ಸ್ಯಾಪ್ ಮತ್ತು ಫೇಸ್ಬುಕ್ನಲ್ಲಿ ಹಾಕಿದ್ದರು. ಈ ಕುರಿತಂತೆ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಅದಾದ ಬಳಿಕ ಈ ರೀತಿಯಲ್ಲಿ ಎಡಿಟ್ ಮಾಡಿರುವ ಫೋಟೋವನ್ನು ಹಾಕಿ ಮಾನಹಾನಿ ಆಗುತ್ತಿರುವ ಫೋಟೋಗಳನ್ನು ಪ್ರಸಾರ ಮಾಡದಂತೆ ಅವರು ಉಡುಪಿ ಜಿಲ್ಲಾ ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ತಂದಿದ್ದರು. ಆದರೆ ಪವರ್ ಟಿವಿ ಎನ್ನುವ ಖಾಸಗಿ ನ್ಯೂಸ್ಚಾನೆಲ್ನ ಮಾಲಕ ರಾಕೇಶ್ ಶೆಟ್ಟಿ ಅವರು ಫೇಸ್ಬುಕ್ನಲ್ಲಿ ಹರಿದಾಡಿದ್ದ ಅದೇ ಹಳೆಯ ಫೋಟೋವನ್ನು ತನ್ನ ಚಾನೆಲ್ನಲ್ಲಿ ಪ್ರಸಾರ ಮಾಡಿದ್ದು, ಅಲ್ಲದೇ ಅದರ ಸಣ್ಣ ವೀಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಸಮಾಜದಲ್ಲಿ ತಿರುಗಾಡದಂತೆ ಸಾರ್ವಜನಿಕವಾಗಿ ಅವಮಾನಿಸಿರುತ್ತಾರೆ ಎಂದು ರಮಿತಾ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.