ಬೆಂಗಳೂರು: ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪಿಸಿ ಕಾಂಗ್ರೆಸ್ ಪಕ್ಷ ನೀಡಿರುವ ಜಾಹಿರಾತು ಇದೀಗ ವಿವಾದಕ್ಕೊಳಗಾಗಿದೆ. ಕಾಂಗ್ರೆಸ್ ಪಕ್ಷದ ಜಾಹಿರಾತನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿದ್ದು ನೀತಿ ಸಂಹಿತೆ ಉಲ್ಲಂಘನೆ ದೂರಿನ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಅವರಿಗೆ ನೋಟಿಸ್ ಜಾರಿಗೊಳಿಸಿದೆ. ಕಾಂಗ್ರೆಸ್ ಮಾಡಿರುವ ನಿರ್ದಿಷ್ಟ ಆರೋಪಗಳ ಕುರಿತಾಗಿ ಸಾಕ್ಷ್ಯಾಧಾರ ಹಾಜರುಪಡಿಸುವಂತೆ ಚುನಾವಣಾ ಆಯೋಗ ತಾಕೀತು ಮಾಡಿದೆ. ಸದ್ಯ ಈ ಬಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ರೇಟ್ ಕಾರ್ಡ್ ಕೊಟ್ಟಿದ್ದು ನಾನಲ್ಲ, ಬಿಜೆಪಿಯವರೇ. ರೇಟ್ ಕಾರ್ಡ್ ನೀಡಿದ್ದು ಯತ್ನಾಳ್, ಗೂಳಿಹಟ್ಟಿ ಶೇಖರ್, ಹೆಚ್.ವಿಶ್ವನಾಥ್ ಎಂದು ಡಿಕೆ ಶಿವಕುಮಾರ್ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಸಿಎಂ ಸ್ಥಾನಕ್ಕೆ ರೇಟ್ ಎಷ್ಟು ಎಂಬುವುದನ್ನು ಬಿಜೆಪಿಯವರೇ ಹೇಳಿದ್ದಾರೆ. ಮಂತ್ರಿ ಸ್ಥಾನಕ್ಕೆ ಎಷ್ಟು ರೇಟ್, ಮಠಗಳ ಸ್ವಾಮೀಜಿಗಳಿಂದ ಎಷ್ಟು ರೇಟ್. ಈ ರೇಟ್ ಕಾರ್ಡ್ ನೀಡಿದ್ದು ಬಿಜೆಪಿಯವರೇ. ಬಿಜೆಪಿಯವರೇ ನೀಡಿದ ರೇಟ್ ಕಾರ್ಡ್ನ್ನು ನಾವು ನೀಡಿದ್ದೇವೆ ಅಷ್ಟೇ ಎಂದರು.
ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಮೂರೇ ದಿನ ಬಾಕಿ ಉಳಿದಿದೆ. ಈ ನಡುವೆ ಆಡಳಿತ ಪಕ್ಷ ಬಿಜೆಪಿ ವಿರುದ್ಧ ಕಾಂಗ್ರೆಸ್ ನೀಡಿರುವ ಜಾಹಿರಾತು ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೇ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಕೂಡಾ ಜಾಹಿರಾತನ್ನು ಗಂಭೀರವಾಗಿ ಪರಿಗಣಿಸಿದೆ. ಪ್ರಜಾ ಪ್ರಾತಿನಿಧ್ಯ ಕಾಯ್ದೆ ಸೆಕ್ಷನ್ 123(4), ಐಪಿಸಿ ಸೆಕ್ಷನ್ 171 ಜಿ ಅಡಿ ಅಪರಾಧವಾಗಿದೆ. ಕಾಂಗ್ರೆಸ್ ಪಕ್ಷದ ಜಾಹೀರಾತಿನಲ್ಲಿನ ನಿರ್ದಿಷ್ಟ ಭ್ರಷ್ಟಾಚಾರ ಆರೋಪಗಳು ಚುನಾವಣೆ ಪ್ರಕ್ರಿಯೆ ಮೇಲೂ ಪರಿಣಾಮ ಬೀರಬಹುದಾದ ಕಾರಣ ನಾಳೆಯೇ ಭ್ರಷ್ಟಾಚಾರ ಆರೋಪಗಳಿಗೆ ಸಾಕ್ಷ್ಯಾಧಾರ ಒದಗಿಸುವಂತೆ ಚುನಾವಣಾ ಆಯೋಗ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಗೆ ನೋಟಿಸ್ ಜಾರಿಗೊಳಿಸಿದೆ.