ಬೆಂಗಳೂರು: ಹೊರ ರಾಜ್ಯದಲ್ಲಿ ಸಿ ಬಿ ಎಸ್ ಇ, ಐಸಿಎಸ್ಇ ವ್ಯಾಸಂಗ ಮಾಡಿ, ಕರ್ನಾಟಕದಲ್ಲಿ ರಾಜ್ಯ ಪಠ್ಯಕ್ರಮದಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಬಯಸುವ ವಿದ್ಯಾರ್ಥಿಗಳಿಗೆ, ಪಿಯು ಬೋರ್ಡ್ ವಿಶೇಷ ವ್ಯವಸ್ಥೆ ಕಲ್ಪಿಸಿದೆ.
ಈ ಕುರಿತಂತೆ ಇಂದು ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. 2023-24ನೇ ಶೈಕ್ಷಣಿಕ ಸಾಲಿಗೆ ಇತರೆ ರಾಜ್ಯಗಳಿಂದ ಸಿಬಿಎಸ್ಇ, ಐಸಿಎಸ್ಇ ಬೋರ್ಡ್ ಗಳಲ್ಲಿ ವ್ಯಾಸಂಗ ಮಾಡಿ, ರಾಜ್ಯ ಪಠ್ಯಕ್ರಮದಲ್ಲಿ ಪ್ರಥಮ ಪಿಯುಸಿಗೆ ದಾಖಲಾತಿ ಬಯಸಿ ಬರುವ ವಿದ್ಯಾರ್ಥಿಗಳಿಗೆ ಇಲಾಖಾ ಜಾಲತಾಣ www.pue.karnataka.gov.in ನಲ್ಲಿ ಒದಗಿಸಲಾದ ಲಿಂಕ್ https://dpue-pragathi.karnataka.gov.in/eligibilitycertificate ಅನ್ನು ಬಳಸಿಕೊಂಡು, ಆನ್ ಲೈನ್ ಮೂಲಕ ತಾತ್ಕಾಲಿಕ ಅರ್ಹತಾ ಪತ್ರವನ್ನು ನೀಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದಿದ್ದಾರೆ.

ವಿದ್ಯಾರ್ಥಿಗಳು ತಾತ್ಕಾಲಿಕ ಅರ್ಹತಾ ಪತ್ರವನ್ನು ಪಡೆಯಲು ಸಂಬಂಧಿಸಿದ ಕಾಲೇಜಿನ ಪ್ರಾಂಶುಪಾಲರನ್ನು ಸಂಪರ್ಕಿಸಲು ಕೋರಿದ್ದಾರೆ. ಈ ವ್ಯವಸ್ಥೆಯಿಂದ ಕೇವಲ ಇತರೆ ರಾಜ್ಯದ ಬೋರ್ಡ್ ಗಳಿಂದ, ಸಿಬಿಎಸ್ಇ ಬೋರ್ಡ್ ಗಳಿಂದ ಮತ್ತು ಐಸಿಎಸ್ಇ ಬೋರ್ಡ್ ಗಳಿಂದ ಬರುವ ವಿದ್ಯಾರ್ಥಿಗಳು ಮಾತ್ರ ಪ್ರಯೋಜನವನ್ನು ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

ವಿದೇಶದಿಂದ, ಐಜಿಸಿಎಸ್ಇ, ಐಬಿ ಬೋರ್ಡ್ ಗಳಿಂದ ಬರುವ ವಿದ್ಯಾರ್ಥಿಗಳು ಹಾಗೂ ದ್ವಿತೀಯ ಪಿಯುಸಿ ದಾಖಲಾಗಲು ಇತರೆ ರಾಜ್ಯದ ಬೋರ್ಡ್ ಗಳಿಂದ, ಸಿಬಿಎಸ್ಇ ಬೋರ್ಡ್ ಗಳಿಂದ ಮತ್ತು ಐಸಿಎಸ್ಇ ಬೋರ್ಡ್ ಗಳಿಂದ ಬರುವ ವಿದ್ಯಾರ್ಥಿಗಳು ಈ ಹಿಂದಿನಂತೆ ಕೇಂದ್ರ ಕಚೇರಿಯಿಂದ ತಾತ್ಕಾಲಿಕ ಅರ್ಹತಾ ಪ್ರಮಾಣ ಪತ್ರವನ್ನು ಪಡೆದು, ನಂತ್ರ ದಾಖಲಾಗಬೇಕಾಗುತ್ತದೆ ಎಂದು ಹೇಳಿದ್ದಾರೆ.

