ಉಡುಪಿ: ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಮತದಾನದಲ್ಲಿ ಕಾರ್ಕಳ ಚುನಾವಣಾಧಿಕಾರಿ ಹಾಗೂ ಪೊಲೀಸರು ಶಾಮೀಲಾಗಿದ್ದು ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಮೋದ್ ಮುತಾಲಿಕ್ ಉಡುಪಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಮಹತ್ವ ಪಡೆದಿದೆ, ನಾಗರಿಕರು ಚುನಾವಣೆಯಲ್ಲಿ ಭಾಗವಹಿಸಬೇಕು ಹಾಗೂ ನಿರ್ಭೀತವಾಗಿ ಮತ ಚಲಾಯಿಸಬೇಕೆಂದು ಚುನಾವಣೆ ಆಯೋಗದಿಂದ ಪ್ರಕಟಿಸಿದೆ. ಚುನಾವಣೆಗಳು ಶಾಂತಿಯುತವಾಗಿ ನ್ಯಾಯಸಮ್ಮತವಾಗಿ ನಡೆಯಬೇಕೆನ್ನುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಸಾಕಷ್ಟು ಸಿಬ್ಬಂದಿಗಳನ್ನು ಹಾಗೂ ಪೊಲೀಸರನ್ನು ನಿಯೋಜಿಸುತ್ತದೆ.ಆದರೆ ಕಾರ್ಕಳದಲ್ಲಿ ಚುನಾವಣೆಗೆ ಕುರಿತಂತೆ ಅಕ್ರಮಗಳು ನಡೆದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗದೇ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ ಎಂದು ಮುತಾಲಿಕ್ ಆರೋಪಿಸಿದ್ದಾರೆ.
ಇದಲ್ಲದೇ ಬ್ಯಾಲೆಟ್ ಯೂನಿಟ್ ನಲ್ಲಿ ರಾಜಕೀಯ ಪಕ್ಷದ ಅಭ್ಯರ್ಥಿಗಳ ಚಿಹ್ನೆಯನ್ನು ಚೆನ್ನಾಗಿ ಮುದ್ರಿಸಲಾಗಿದ್ದು, ಉಳಿದ ಅಭ್ಯರ್ಥಿಗಳ ಚಿಹ್ನೆಗಳನ್ನು ಉದ್ದೇಶಪೂರ್ವಕವಾಗಿ ಮಬ್ಬಾಗಿ ಮುದ್ರಿಸಲಾಗಿದ್ದು ಇದರಿಂದ ಮತದಾರರಿಗೆ ಗೊಂದಲ ಮೂಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಭ್ಯರ್ಥಿಗಳು ಚುನಾವಣಾಧಿಕಾರಿಗಳಿಗೆ ಕರೆ ಮಾಡಿದರೆ ಸರಿಯಾಗಿ ಸ್ಪಂದಿಸುತ್ತಿರಲಿಲ್ಲ,ಮತದಾರರನ್ನು ಓಲೈಸಲು ಕ್ಷೇತ್ರದಾದ್ಯಂತ ಬಹಿರಂಗವಾಗಿ ಮಾಂಸದ ಊಟ,ಮದ್ಯ ವಿತರಣೆ ಮಾಡುತ್ತಿದ್ದರೂ ಈ ಕುರಿತು ತಕರಾರು ಸಲ್ಲಿಸಿದ್ದರೂ ಕ್ರಮ ಜರುಗಿಸದೇ ಅಕ್ರಮಕ್ಕೆ ಸಹಕರಿಸಿದ್ದಾರೆ ಎಂದು ದೂರಿದ್ದಾರೆ.
ಬಹಿರಂಗ ಪ್ರಚಾರ ಮುಗಿದ ಬಳಿಕ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ 5ಕ್ಕಿಂತ ಹೆಚ್ಚು ಕಾರ್ಯಕರ್ತರ ಜತೆಗೂಡಿ ಮನೆಮನೆ ಪ್ರಚಾರದ ಮೂಲಕ ಮತಯಾಚನೆ ಮಾಡಿದ್ದಾರೆ ಇದು ಸೆಕ್ಷನ್ 144 ಕಾಯಿದೆಯ ಉಲ್ಲಂಘನೆಯಾಗಿದೆ, ಆದರೂ ಅಧಿಕಾರಿಗಳು ಹಾಗೂ ಪೊಲೀಸರು ಕ್ರಮ ಜರುಗಿಸಿಲ್ಲ ಎಂದು ಆರೋಪಿಸಿದ್ದಾರೆ.ಮತಗಟ್ಟೆಯ 200 ಮೀಟರ್ ಪ್ರದೇಶದಲ್ಲಿ ಅಭ್ಯರ್ಥಿಗಳ ಪರವಾಗಿ ಯಾರೂ ಪ್ರಚಾರ ಮಾಡುವಂತಿಲ್ಲ,ಟೇಬಲ್, ಪೆಂಡಾಲ್ ಹಾಕುವಂತಿಲ್ಲ ಎನ್ನುವ ನಿಯಮಾವಳಿ ಇದ್ದರೂ ಅದನ್ನು ಉಲ್ಲಂಘಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರಮುಖವಾಗಿ ಮಿಯ್ಯಾರು ಮತಗಟ್ಟೆ ಸಂಖ್ಯೆ 155ರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕನೋರ್ವ ವಿದೇಶದಲ್ಲಿರುವ ವ್ಯಕ್ತಿಯ ಹೆಸರಿನಲ್ಲಿ ಮತ ಚಲಾಯಿಸಿ, ಅಕ್ರಮ ಮತದಾನ ಮಾಡಿರುವ ಕುರಿತು ದಾಖಲೆ ಸಹಿತ ಸಿಕ್ಕಿಬಿದ್ದಿದ್ದು,ಅಕ್ರಮ ಮತದಾನದಲ್ಲಿ ಶಾಮೀಲಾದ ವ್ಯಕ್ತಿಗಳ ವಿರುದ್ಧ ಕ್ರಮ ಜರುಗಿಸುವಂತೆ ಸಾರ್ವಜನಿಕರು ಪ್ರತಿಭಟನೆ ನಡೆಸಿದರೂ ಪೊಲೀಸರು ಹಾಗೂ ಚುನಾವಣಾಧಿಕಾರಿಗಳು ಇಂತಹ ಗಂಭೀರ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿರುವುದು ಸಾಬೀತಾಗಿದೆ ಎಂದು ಉಲ್ಲೇಖಿಸಿದ್ದಾರೆ. ಇದಲ್ಲದೇ ಮೃತಪಟ್ಟ ಮತದಾರರ ಹೆಸರಿನಲ್ಲಿಯೂ ಮತ ಚಲಾವಣೆಯಾಗಿದ್ದು, ಇದರ ಕುರಿತು ತನಿಖೆಯಾಗಬೇಕು ಎಂದು ಮುತಾಲಿಕ್ ಸಲ್ಲಿಸಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.