ಬೆಂಗಳೂರು: ಹೊಸಕೋಟೆ ತಾಲೂಕಿನ ಡಿ.ಶೆಟ್ಟಿ ಹಳ್ಳಿಯಲ್ಲಿ ಕಾಂಗ್ರೆಸ್ ವಿಜಯೋತ್ಸವ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತನ ಕೊಲೆಯಾಗಿದೆ. ಬೆಂಗಳೂರು ಗ್ರಾಮಾತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಡಿ.ಶೆಟ್ಟಿಹಳ್ಳಿಯಲ್ಲಿ ಕಾಂಗ್ರೆಸ್ ವಿಜಯೋತ್ಸವ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತ ಕೃಷ್ಣಪ್ಪ (55) ಎನ್ನುವವರನ್ನು ಶನಿವಾರ ರಾತ್ರಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಈ ಸಂಬಂಧ ಇದೀಗ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಕೊಲೆಯಾದ ಕೃಷ್ಣಪ್ಪನ ಸೋದರಳಿಯ ಆದಿತ್ಯ (21) ಎನ್ನುವವನನ್ನು ಪೊಲೀಸರು ಬಂಧಿಸಿ ತನಿಖೆ ನಡೆಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಶರತ್ ಬಚ್ಚೇಗೌಡ ವಿಜಯಶಾಲಿ ಎಂದು ಘೋಷಿಸಿದ ಕೂಡಲೇ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ಪ್ರಾರಂಭಿಸಿದರು. ಮಾಜಿ ಸಚಿವ ಎಂಟಿಬಿ ನಾಗರಾಜ್ ವಿರುದ್ಧ ಎರಡನೇ ಬಾರಿ ಸ್ಪರ್ಧಿಸಿದ್ದ ಶರತ್ ಅವರು ಗೆಲುವು ಸಾಧಿಸಿದ್ದರು. ಈ ಹಿನ್ನೆಲೆಯಲ್ಲಿ ಶರತ್ ಬಚ್ಚೇಗೌಡ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಎಂಟಿಬಿ ನಾಗರಾಜ್ ಅವರ ಪ್ರಚಾರ ಮಾಡಿದ್ದ ಬಿಜೆಪಿ ಕಾರ್ಯಕರ್ತ ಕೃಷ್ಣಪ್ಪ (55) ಅವರ ಮನೆ ಮುಂದೆಯೂ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿದ್ದರು. ಈ ವೇಳೆ ತೀವ್ರ ವಾಗ್ವಾದ ಶುರುವಾಗಿದೆ. ಈ ವೇಳೆ ಕೃಷ್ಣಪ್ಪ ಅವರ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ಕೂಡಲೇ ಮಧ್ಯೆ ಪ್ರವೇಶಿಸಿದ ಕೃಷ್ಣಪ್ಪ ಅವರ ಪತ್ನಿ ಹಾಗೂ ಮಗ ಬಾಬು ಅವರು, ಕೃಷ್ಣಪ್ಪ ಅವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೃಷ್ಣಪ್ಪ ಅವರು ಸಾವನ್ನಪ್ಪಿದ್ದಾರೆ.


