ಮಂಗಳೂರು: ಆರು ಬಾರಿ ಶಾಸಕರಾಗಿ ಆಯ್ಕೆಯಾಗಿ, ಈ ಬಾರಿಯೂ ಮತ್ತೆ ಸೋಲು ಕಂಡ ಬಂಟ್ವಾಳದ ಮಾಜಿ ಶಾಸಕ ರಮಾನಾಥ್ ರೈ ತಮ್ಮ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಒಂಭತ್ತನೇ ಬಾರಿಯ ವಿಧಾನಸಭಾ ಚುನಾವಣೆ ಸ್ಪರ್ಧೆಯ ಸೋಲಿನ ಬೆನ್ನಲ್ಲೇ ರಮಾನಾಥ್ ರೈ ಈ ನಿರ್ಧಾರಕ್ಕೆ ಬಂದಿದ್ದಾರೆ.
ಇಂದು(ಮಂಗಳವಾರ) ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಮಾನಾಥ್ ರೈ, ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಭೂತಪೂರ್ವ ಜಯ ಸಾಧಿಸಿದೆ. ಆದರೆ ದ.ಕ ಜಿಲ್ಲೆಯ ಮಟ್ಟಿಗೆ ಸಣ್ಣ ಮಟ್ಟಿನ ಹಿನ್ನಡೆ ಆಗಿದೆ. ಕಾಂಗ್ರೆಸ್ ಮೇಲೆ ವಿಶ್ವಾಸ ಇಟ್ಟು ರಾಜ್ಯದ ಜನ ಮತ ಕೊಟ್ಟಿದ್ದಾರೆ. ಜಿಲ್ಲೆಯಲ್ಲಿ ಸೋತರೂ ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದೆ. ಹೀಗಾಗಿ ಜಿಲ್ಲೆಯ ಕಾರ್ಯಕರ್ತರು ಎದೆಗುಂದ ಬೇಡಿ. ನಾನು ಇದು ನನ್ನ ಕಡೆಯ ಚುನಾವಣೆ ಅಂತ ಹೇಳಿದ್ದೇನೆ. ಆದರೆ ಸೋತರೂ ಪಕ್ಷದ ಕಾರ್ಯಗಳಲ್ಲಿ ನಾನು ಮುಂಚೂಣಿಯಲ್ಲಿ ಇರ್ತೇನೆ. ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ತಿಳಿಸಿದ್ದಾರೆ.