Share this news

ನವದೆಹಲಿ : ನಕಲಿ ವೈದ್ಯರ ಹಾವಳಿ ತಡೆಯುವ ಸಲುವಾಗಿ ಇನ್ನು ಮುಂದೆ ಎಲ್ಲಾ ವೈದ್ಯರು, ರಾಜ್ಯ ವೈದ್ಯಕೀಯ ಮಂಡಳಿಗಳ ಜತೆಗೆ ರಾಷ್ಟ್ರೀಯ ವೈದ್ಯಕೀಯ ಆಯೋಗದಲ್ಲಿ (ಎನ್‌ಎಂಸಿ) ಕೂಡ ಹೆಸರು ನೋಂದಾಯಿಸಿಕೊಳ್ಳುವುದನ್ನು ಕೇಂದ್ರ ಸರ್ಕಾರ ಕಡ್ಡಾಯ ಮಾಡಿದೆ. ಜೊತೆಗೆ ದೇಶದಲ್ಲಿ ವೈದ್ಯಕೀಯ ವೃತ್ತಿ ಕೈಗೊಳ್ಳಲು ವಿಶಿಷ್ಟ ಗುರುತಿನ ಸಂಖ್ಯೆಯನ್ನು (ಯುಐಡಿ) ಪಡೆಯಬೇಕು ಎಂದು ಸೂಚಿಸಿದೆ.

ವೈದ್ಯರ ಹೆಸರು ನೋಂದಣಿ ದತ್ತಾಂಶವನ್ನು ರಾಷ್ಟ್ರೀಯ ವೈದ್ಯಕೀಯ ರಿಜಿಸ್ಟರ್‌ನಲ್ಲಿ ಶೇಖರಿಸಿಡಲಾಗುತ್ತದೆ. ಜತೆಗೆ ಅದನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ ಮತ್ತು ಎನ್‌ಎಂಸಿ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ.ನೋಂದಣಿ ಸಂಖ್ಯೆ, ಹೆಸರು, ನೋಂದಣಿ ದಿನಾಂಕ, ಕೆಲಸದ ಸ್ಥಳ (ಆಸ್ಪತ್ರೆ/ಸಂಸ್ಥೆಯ ಹೆಸರು), ವೈದ್ಯಕೀಯ ಅರ್ಹತೆ, ಹೆಚ್ಚುವರಿ ವೈದ್ಯಕೀಯ ಅರ್ಹತೆ, ವಿಶೇಷತೆ ಮತ್ತು ವಿದ್ಯಾಭ್ಯಾಸ ಮಾಡಿರುವ ಸಂಸ್ಥೆ ಅಥವಾ ವಿಶ್ವವಿದ್ಯಾಲಯದ ಹೆಸರು ಸೇರಿದಂತೆ ವೈದ್ಯರಿಗೆ ಸಂಬಂಧಿಸಿದ ಮಾಹಿತಿಯನ್ನು ವೆಬ್‌ಸೈಟ್‌ ಪ್ರದರ್ಶಿಸುತ್ತದೆ.

ರಾಷ್ಟ್ರೀಯ ವೈದ್ಯಕೀಯ ಆಯೋಗದ ಕಾಯ್ದೆ, 2019 ರ ಅಡಿಯಲ್ಲಿ ಪ್ರಾಥಮಿಕ ವೈದ್ಯಕೀಯ ಅರ್ಹತೆಯನ್ನು ಪಡೆದ ಮತ್ತು ಕಾಯಿದೆಯ ಸೆಕ್ಷನ್‌ 15 ರ ಅಡಿಯಲ್ಲಿ ನಡೆದ ರಾಷ್ಟ್ರೀಯ ಎಕ್ಸಿಟ್‌ ಟೆಸ್ಟ್‌ನಲ್ಲಿ ಅರ್ಹತೆ ಪಡೆದ ಯಾವುದೇ ವ್ಯಕ್ತಿ ಎನ್‌ಎಂಆರ್‌ನಲ್ಲಿ ನೋಂದಣಿಗೆ ಅರ್ಹರಾಗಿರುತ್ತಾರೆ. ವಿದೇಶಿ ವೈದ್ಯಕೀಯ ಶಿಕ್ಷಣ ಪಡೆದವರು ಮತ್ತು ಕಾಯಿದೆಯ ಸೆಕ್ಷನ್‌ 15ರ ಅಡಿಯಲ್ಲಿ ನಡೆಯುವ ರಾಷ್ಟ್ರೀಯ ಎಕ್ಸಿಟ್‌ ಟೆಸ್ಟ್‌ನಲ್ಲಿ ಅರ್ಹತೆ ಪಡೆದವರು ಕೂಡ ಎನ್‌ಎಂಆರ್‌ನಲ್ಲಿ ನೋಂದಣಿಗೆ ಅರ್ಹರಾಗಿರುತ್ತಾರೆ ಎಂದು ಅದು ಹೇಳಿದೆ.

ಯುಐಡಿಯನ್ನು ಎಥಿಕ್ಸ್‌ ಮತ್ತು ಮೆಡಿಕಲ್‌ ರಿಜಿಸ್ಪ್ರೇಶನ್‌ ಬೋರ್ಡ್‌ (ಇಎಮ್‌ಆರ್‌ಬಿ), ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಕೇಂದ್ರೀಯವಾಗಿ ಸಿದ್ಧಪಡಿಸುತ್ತದೆ ಮತ್ತು ಭಾರತದಲ್ಲಿ ವೈದ್ಯಕೀಯ ವೃತ್ತಿ ಕೈಗೊಳ್ಳಲು ಅರ್ಹತೆಯನ್ನು ನೀಡುತ್ತದೆ.ಭಾರತೀಯ ವೈದ್ಯಕೀಯ ರಿಜಿಸ್ಟರ್‌ ಅಥವಾ ರಾಜ್ಯ ವೈದ್ಯಕೀಯ ರಿಜಿಸ್ಟರ್‌ನಲ್ಲಿ ಹೆಸರು ದಾಖಲು ಮಾಡಿಕೊಂಡಿರುವ ವೈದ್ಯರು, ನೋಂದಣಿ ಸಂಖ್ಯೆಯನ್ನು ಹೊಂದಿಲ್ಲದಿದ್ದರೆ, ಇನ್ನು ಮೂರು ತಿಂಗಳ ಅವಧಿಯಲ್ಲಿ ‘ನೈತಿಕ ಮತ್ತು ವೈದ್ಯಕೀಯ ನೋಂದಣಿ ಮಂಡಳಿ’ಯ ವೆಬ್‌ ಪೋರ್ಟಲ್‌ನಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು. ಆಗ ನೀಡುವ ಲೈಸೆನ್ಸ್‌ ವಿತರಿಸಿದ ದಿನಾಂಕದಿಂದ 5 ವರ್ಷಗಳ ಅವಧಿಗೆ ಮಾನ್ಯವಾಗಿರುತ್ತದೆ.

 

Leave a Reply

Your email address will not be published. Required fields are marked *