ಬೆಂಗಳೂರು :ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು 2 ನೇ ಬಾರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮೊದಲ ಬಾರಿಗೆ ಉಪ ಮುಖ್ಯಮಂತ್ರಿಯಾಗಿ ಹಾಗೂ 8 ಮಂದಿ ಶಾಸಕರು ಸಚಿವರಾಗಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಇಂದು ಮಧ್ಯಾಹ್ನ 12.30 ಕ್ಕೆ ರಾಜ್ಯಪಾಲ ಥಾವತ್ ಚಂದ್ ಗೆಹ್ಲೋಟ್ ಅವರು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿದಂತೆ 8 ಮಂದಿ ನೂತನ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರತಿಜ್ಞೆ ಬೋಧಿಸಿದ್ದಾರೆ. ಇಂದು ಮಧ್ಯಾಹ್ನ 12.30 ಕ್ಕೆ ಕರ್ನಾಟಕದ 31 ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅದೇ ರೀತಿ 8 ಮಂದಿ ನೂತನ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಳಿಕ ಮಾತನಾಡಿದ ರಾಹುಲ್ ಗಾಂಧಿ, ರಾಜ್ಯದ ಜನತೆಗೆ ನನ್ನ ಕಡೆಯಿಂದ ಹಾಗೂ ಕಾಂಗ್ರೆಸ್ ಪಕ್ಷದಿಂದ ಧನ್ಯವಾದಗಳನ್ನು ತಿಳಿಸುತ್ತೇನೆ. ನಿಮ್ಮೆಲ್ಲರ ಸಹಕಾರದಿಂದ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣವಾಗಿ ಬಹುಮತ ಬಂದಿದೆ. ನಾವು ಭ್ರಷ್ಟಾಚಾರ ಮುಕ್ತ ಸರ್ಕಾರವನ್ನು ನಡೆಸುತ್ತೇವೆ. ನಾವು ಕೊಟ್ಟ ಗ್ಯಾರಂಟಿ ಘೋಷಣೆಗಳನ್ನು ಜಾರಿಗೆ ತರುತ್ತೇವೆ ಎಂದು ಹೇಳಿದ್ದಾರೆ.

ಗೃಹಲಕ್ಷ್ಮಿ ಯೋಜನೆ – ಪ್ರತಿತಿಂಗಳು ಮಹಿಳೆಯರಿಗೆ 2 ಸಾವಿರ ರೂ.
ಗೃಹಜ್ಯೋತಿ- 200 ಯುನಿಟ್ ವಿದ್ಯುತ್ ಉಚಿತ
ಅನ್ನಭಾಗ್ಯ-10 ಕೆಜಿ ಅಕ್ಕಿ ಉಚಿತ
ಶಕ್ತಿ-ಮಹಿಳೆಯರಿಗೆ ಉಚಿತವಾಗಿ ಬಸ್ ಪ್ರಯಾಣ
ಯುವನಿಧಿ- ಪದವಿಧರರಿಗೆ 3,000 ರೂ. ಡಿಪ್ಲೋಮಾ ಮಾಡಿದ ನಿರುದ್ಯೋಗಿಗಳಿಗೆ 1,500 ರೂ. ನೀಡುತ್ತೇವೆ.
ನಾವು ಕೊಟ್ಟ ಮಾತನ್ನು ನಾವು ಈಡೇರಿಸುತ್ತೇವೆ. ಮೊದಲ ಸಚಿವ ಸಂಪುಟ ಸಭೆ ನಡೆಯಲಿದ್ದು, ಇಂದಿನ ಸಂಪುಟದಲ್ಲೇ 5 ಗ್ಯಾರಂಟಿ ಯೋಜನೆ ಜಾರಿಗೆ ಬರಲಿವೆ ಎಂದು ಹೇಳಿದ್ದಾರೆ.


