ಬೆಂಗಳೂರು: ಮೇ.22ರಿಂದ ನೂತನ ಶಾಸಕರ ಪ್ರಮಾಣವಚನ ಕಾರ್ಯಕ್ರಮಕ್ಕಾಗಿ ವಿಧಾನಸಭೆಯ ವಿಶೇಷ ಅಧಿವೇಶನ ನಡೆಸುವುದಾಗಿ ಸಿಎಂ ಸಿದ್ಧರಾಮಯ್ಯ ತಿಳಿಸಿದ್ದರು. ಈ ಬೆನ್ನಲ್ಲೇ ವಿಧಾನಸಭೆಯ ಸಭಾಧ್ಯಕ್ಷರಾಗಿ ಆರ್ ವಿ ದೇಶಪಾಂಡೆ ಅವರನ್ನು ನೇಮಕ ಮಾಡಲಾಗಿದೆ.

ಈ ಸಂಬಂಧ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಭಾರತ ಸಂವಿಧಾನದ 180ನೇ ಅನುಚ್ಛೇದ (1)ನೇ ಖಂಡದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಆದ ನಾನು, ಸದನವು ಸಭಾಧ್ಯಕ್ಷರನ್ನು ಯುಕ್ತವಾಗಿ ಚುನಾಯಿಸುವವರೆಗೆ ವಿಧಾನಸಭೆಯ ಸಭಾಧ್ಯಕ್ಷರ ಹುದ್ದೆಯ ಕರ್ತವ್ಯಗಳನ್ನು ನಿರ್ವಹಿಸಲು ದಿನಾಂಕ 22-05-2023ರಿಂದ ಜಾರಿಗೆ ಬರುವಂತೆ ವಿಧಾನಸಭೆಯ ಸದಸ್ಯರಾದಂತ ಆರ್ ವಿ ದೇಶಪಾಂಡೆ ಅವರನ್ನು ನೇಮಿಸುತ್ತಿದ್ದೇನೆ ಎಂದಿದ್ದಾರೆ.





