ಬೆಂಗಳೂರು:ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿರುವ ಹಿನ್ನೆಲೆಯಲ್ಲಿ16ನೇ ವಿಧಾನಸಭೆಯ ಮೊಟ್ಟ ಮೊದಲ ವಿಶೇಷ ಅಧಿವೇಶನವು ನಾಳೆ (ಮೇ 22)ಯಿಂದ ಆರಂಭವಾಗಲಿದ್ದು, ಮೇ 24ರ ವರೆಗೆ ನಡೆಯಲಿದೆ. ಸಾರ್ವತ್ರಿಕ ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷ ಐತಿಹಾಸಿಕ ಗೆಲುವಿನ ಮೂಲಕ ಅಧಿಕಾರಕ್ಕೆ ಬಂದಿದ್ದು, ನೂತನ ಶಾಸಕರ ಪದಗ್ರಹಣ ಹಾಗೂ ಸ್ಪೀಕರ್ ಆಯ್ಕೆಯ ಚುನಾವಣೆ ಹಿನ್ನೆಲೆಯಲ್ಲಿ ಮೂರು ದಿನಗಳ ವಿಶೇಷ ಅಧಿವೇಶನ ಕರೆಯಲಾಗಿದೆ.
ಸೋಮವಾರ ಬೆಳಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿರುವ ವಿಧಾನಸಭೆಯ ಸಭಾಂಗಣದಲ್ಲಿ ಅಧಿವೇಶನ ಆರಂಭಗೊಳ್ಳಲಿದ್ದು, ಹಂಗಾಮಿ ಸ್ಪೀಕರ್ ಆಗಿ ನೇಮಕವಾಗಿರುವ ಹಿರಿಯ ಸದಸ್ಯ ಆರ್.ವಿ. ದೇಶಪಾಂಡೆ ಸದನದ ಕಾರ್ಯ ಕಲಾಪಗಳನ್ನು ನಡೆಸಿಕೊಡಲಿದ್ದಾರೆ.
ರಾಜ್ಯದ 24ನೇ ಸಿಎಂ ಆಗಿ ಆಯ್ಕೆಯಾಗಿರುವ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ರಾಜ್ಯದ ಎಲ್ಲಾ 224 ಮಂದಿ ನೂತನ ಸದಸ್ಯರಿಗೆ ಹಂಗಾಮಿ ಸ್ಪೀಕರ್ ಆರ್.ವಿ.ದೇಶಪಾಂಡೆ ಅವರು ಅಧಿಕಾರ ಪದ ಮತ್ತು ಗೌಪ್ಯತಾ ಪ್ರಮಾಣ ವಚನವನ್ನು ಬೋಧಿಸಲಿದ್ದಾರೆ.
ಮೇ 24ರಂದು ವಿಧಾನಸಭೆಯ ನೂತನ ಸ್ಪೀಕರ್ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಬಹುತೇಕ ಆರ್.ವಿ.ದೇಶಪಾಂಡೆ ಅವರನ್ನೇ ಸಭಾಧ್ಯಕ್ಷರನ್ನಾಗಿ ಮುಂದುವರಿಸಲು ಆಡಳಿತಾರೂಢ ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಆರ್.ವಿ.ದೇಶಪಾಂಡೆಗೆ ಸ್ಪೀಕರ್ ಸ್ಥಾನ ಅಲಂಕರಿಸಲು ಮನಸ್ಸಿಲ್ಲ. ಒಂದು ವೇಳೆ ಹೈಕಮಾಂಡ್ ಸೂಚಿಸಿದ್ದಲ್ಲಿ ಅವರು ಒಪ್ಪಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.
ವಿಪಕ್ಷ ನಾಯಕ ಯಾರು?
65 ಸ್ಥಾನಗಳನ್ನು ಪಡೆದಿರುವ ಬಿಜೆಪಿ ವಿರೋಧ ಪಕ್ಷವಾಗಿ ಹೊರಹೊಮ್ಮಿದ್ದು ವಿಪಕ್ಷ ನಾಯಕನಾಗಿ ಸದನವನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ ಅರವಿಂದ ಬೆಲ್ಲದ್, ಬಸನಗೌಡ ಪಾಟೀಲ್ ಯತ್ನಾಳ್,ಸುನಿಲ್ ಕುಮಾರ್ ಅವರ ಹೆಸರುಗಳು ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಕೇಳಿ ಬರುತ್ತಿದೆ.
ನಿಷೇಧಾಜ್ಞೆ ಜಾರಿ: ವಿಶೇಷ ಅಧಿವೇಶನದ ಹಿನ್ನೆಲೆಯಲ್ಲಿ ಮೇ 22ರಿಂದ 24ರ ವರೆಗೆ ಪ್ರತಿದಿನ ಬೆಳಗ್ಗೆ 6 ರಿಂದ ರಾತ್ರಿ 12ಗಂಟೆಯ ವರೆಗೆ ವಿಧಾನಸೌಧ ಕಟ್ಟಡದ ಸುತ್ತಲೂ ಎರಡು ಕಿ.ಮೀ. ವ್ಯಾಪ್ತಿಯಲ್ಲಿ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಆದೇಶ ಹೊರಡಿಸಿದ್ದಾರೆ