ಕಾರ್ಕಳ:ಸ್ವಾರ್ಥ ಮನೋಭಾವನೆಯಿಲ್ಲದೇ ಕೇವಲ ಸಮಾಜ ಸೇವೆ ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರದ ಸಮಸ್ತ ಜನರಿಗೆ ನ್ಯಾಯ ಒದಗಿಸಲು ರಾಜಕಾರಣಕ್ಕೆ ಬಂದಿದ್ದೇನೆ ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಶೆಟ್ಟಿ ಹೇಳಿದರು.
ಅವರು ಸೋಮವಾರ ಕಾರ್ಕಳ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ವಿಜಯೋತ್ಸವ ಹಾಗೂ ಕಾರ್ಯಕರ್ತರಿಗೆ ಏರ್ಪಡಿಸಲಾಗಿದ್ದ ಅಭಿನಂದನಾ ಸಭೆಯಲ್ಲಿ ಮಾತನಾಡಿದರು.
ಕಾರ್ಯಕರ್ತರ ಪರಿಶ್ರಮದ ಫಲವಾಗಿ ಕಾರ್ಕಳದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ, ಆದರೆ ಪಕ್ಷದ ಕೆಲವು ಮುಖಂಡರು ನಮ್ಮ ವಿರುದ್ದವೇ ಪಿತೂರಿ ನಡೆಸಿ ದ್ರೋಹ ಎಸಗಿದ ಪರಿಣಾಮ ಪಕ್ಷಕ್ಕೆ ಸೋಲಾಗಿದೆ. ಇದು ನಾಯಕರ ಸೋಲೇ ವಿನಃ ಕಾರ್ಯಕರ್ತರ ಸೋಲು ಅಲ್ಲ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಬಂದಿರುವ ಹಿನ್ನಲೆಯಲ್ಲಿ ಪಕ್ಷ ಸಂಘಟನೆಗೆ ಕಷ್ಟವಿಲ್ಲ,ಕಾರ್ಕಳದಲ್ಲಿ ಪಕ್ಷದ ಕಚೇರಿಯನ್ನು ತೆರೆದು ವಾರಕ್ಕೆ ಎರಡು ದಿನ ಕಾರ್ಕಳದಲ್ಲಿ ಇದುಕೊಂಡು ಕಾರ್ಯಕರ್ತರ ನೋವು ನಲಿವುಗಳಿಗೆ ಧ್ವನಿಯಾಗುತ್ತೇನೆ, ಕಾರ್ಯಕರ್ತರಿಗೆ ಕಾಂಗ್ರೆಸ್ ಕಚೇರಿ ಸದಾ ತೆರೆದಿದ್ದು ಏನೇ ಸಮಸ್ಯೆಗಳಿದ್ದರೂ ಮುಕ್ತವಾಗಿ ಹಂಚಿಕೊಳ್ಳಲು ಅವಕಾಶವಿದೆ.ಕಾರ್ಕಳದ 209 ಬೂತಿಗೂ ಭೇಟಿ ನೀಡಿ ಕಾರ್ಯಕರ್ತರೊಡನೆ ಬೆರೆತು ಪಕ್ಷ ಕಟ್ಟುವುದಾಗಿ ಉದಯ ಶೆಟ್ಟಿ ಭರವಸೆ ನೀಡಿದರು.ಈಗಾಗಲೇ ಸಾಕಷ್ಟು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಬರಲು ಸಜ್ಜಾಗಿದ್ದಾರೆ, ಮುಂದಿನ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯಕರ್ತರು ಈಗಲೇ ಪಕ್ಷ ಸಂಘಟನೆಗೆ ಮುಂದಾಗಬೇಕು, ಪಕ್ಷಕ್ಕಾಗಿ ಪ್ರಮಾಣಿಕತೆ ಹಾಗೂ ನಿಷ್ಟೆಯಿಂದ ದುಡಿಯುವವರಿಗೆ ಮುಂದಿನ ದಿನಗಳಲ್ಲಿ ಉತ್ತಮ ಅವಕಾಶ ಸಿಗಲಿದೆ ಈ ನಿಟ್ಟಿನಲ್ಲಿ ಎಲ್ಲಾ ಅಭಿಪ್ರಾಯಬೇಧಗಳನ್ನು ಮರೆತು ದುಡಿಯೋಣ ಎಂದರು.
ಕಾರ್ಕಳ ಪುರಸಭಾ ಸದಸ್ಯ ಶುಭದ್ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು 20 ದಿನಗಳ ಹಿಂದೆ ಬಂದವರು ಎಂದು ಅವಹೇಳನ ಮಾಡಿದ ಬಿಜೆಪಿ ಸುನಿಲ್ ಕುಮಾರ್ ಅವರ ಗೆಲುವಿನ ಅಂತರವನ್ನು 44 ಸಾವಿರದಿಂದ 4 ಸಾವಿರಕ್ಕೆ ಇಳಿಸಿ ಕಾರ್ಕಳದ ಮತದಾರರು ತಕ್ಕ ಉತ್ತರ ನೀಡಿದ್ದಾರೆ.ಕಾರ್ಕಳದಲ್ಲಿ ನಿಮ್ಮ ಗೆಲುವು ನಿಜವಾದ ಸೋಲು, ರಾಜ್ಯದಲ್ಲಿ ನಮ್ಮದೇ ಸರ್ಕಾರವಿದೆ ಆದ್ದರಿಂದ ಕಾರ್ಕಳಕ್ಕೆ ಉದಯ ಶೆಟ್ಟಿ ನಮ್ಮ ಶಾಸಕರು, ಕಾರ್ಕಳ ಕ್ಷೇತ್ರವೇ ನಮಗೆ ವಿಧಾನಸೌಧ ಎಂದು ಶುಭದ ರಾವ್ ಬಣ್ಣಿಸಿದರು.ಸೋಲಿನ ಭೀತಿಯಿಂದ ಹೊರಬರಲಾಗದೇ ಸುನಿಲ್ ಕುಮಾರ್ ಕಂಗೆಟ್ಟು ಕಾಂಗ್ರೆಸ್ ಕಾರ್ಯಕರ್ತರನ್ನು ನೋಡಿಕೊಳ್ಳುತ್ತೇನೆ ಎನ್ನುವ ಬೆದರಿಕೆ ಹಾಕಿದ್ದಾರೆ, ನಿಮ್ಮ ಬೆದರಿಕೆಗೆ ಹೆದರುವವರು ನಾವಲ್ಲ, ನಿಮ್ಮ ವಿರುದ್ಧದ ನಮ್ಮ ಹೋರಾಟ ನಿರಂತರವಾಗಿರುತ್ತದೆ,ಮುAದಿನ ದಿನಗಳಲ್ಲಿ ಸರ್ಕಾರ ನಿಮ್ಮ ಭ್ರಷ್ಟಾಚಾರದ ಬಂಡವಾಳ ಬಯಲು ಮಾಡಲಿದೆ ಎಂದು ಶುಭದ ರಾವ್ ಎಚ್ಚರಿಸಿದರು.
ವೇದಿಕೆಯಲ್ಲಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ,ಶೇಖರ ಮಡಿವಾಳ, ಕೆಪಿಸಿಸಿ ಸದಸ್ಯರಾದ ನೀರೆ ಕೃಷ್ಣ ಶೆಟ್ಟಿ, ಸುರೇಂದ್ರ ಶೆಟ್ಟಿ, ಗಿರೀಶ್ ಶೆಟ್ಟಿ ತೆಳ್ಳಾರು,ದೀಪಕ್ ಕೋಟ್ಯಾನ್,ಚಂದ್ರಹಾಸ ಸುವರ್ಣ,ಸುಪ್ರೀತ್ ಶೆಟ್ಟಿ ಕೆದಿಂಜೆ, ಅಶ್ಪಕ್ ಅಹಮ್ಮದ್,ಜಾರ್ಜ್ ಕ್ಯಾಸ್ಟಲಿನೋ ಮುಂತಾದವರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಕಾರ್ಕಳದ ಪುಲ್ಕೇರಿ ಬೈಪಾಸ್ ಮೂಲಕ ಕಾರ್ಕಳ ಪೇಟೆ, ಬಂಡೀಮಠ ಮಾರ್ಗವಾಗಿ ಜೋಡುರಸ್ತೆವರೆಗೆ ಸಾಗಿ ಅಲ್ಲಿಂದ ಪಕ್ಷದ ಕಚೇರಿಯವರೆಗೆ ಬೃಹತ್ ವಾಹನ ರ‍್ಯಾಲಿ ನಡೆಯಿತು. ಸಾವಿರಾರು ಕಾರ್ಯಕರ್ತರ ಜತೆಗೆ ಪಕ್ಷದ ಮುಖಂಡರುಗಳು ರ‍್ಯಾಲಿಯಲ್ಲಿ ಭಾಗವಹಿಸಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು