Share this news

ಕಾರ್ಕಳ: ವಿಪರೀತ ಬಿಲಿಸಿನ ಝಳ ಹಾಗೂ ಕುಡಿಯುವ ನೀರಿನ ಸಮಸ್ಯೆಯ ನಡುವೆಯೇ ಈ ಬಾರಿಯ ವಿಧಾನಸಭೆ ಚುನಾವಣೆ ಮುಗಿದಿದ್ದರೂ ಜನರಿಗೆ ಕುಡಿಯುವ ನೀರಿನ ಬವಣೆ ತಪ್ಪಿಲ್ಲ.ಭೀಕರ ರಣಬಿಸಿಲಿನಿಂದ ನೀರಿನ ಮೂಲಗಳು ಬತ್ತಿಹೋಗಿದ್ದು ಕೆರೆಕಟ್ಟೆಗಳು ಆಟದ ಮೈದಾನದಂತಾಗಿವೆ. ಇದರಿಂದ ಜಾನುವಾರು ಪಕ್ಷಿ ಸಂಕುಲಗಳಿಗೂ ಸಂಕಷ್ಟ ಎದುರಾಗಿದೆ


ಕಳೆದ ಬಾರಿಯ ಅಕ್ಟೋಬರ್ ನಂತರ ಮೇ ತಿಂಗಳವರೆಗೂ ಸಮರ್ಪಕವಾಗಿ ಮಳೆಯಾಗದ ಹಿನ್ನಲೆಯಲ್ಲಿ ಕಾರ್ಕಳ ವಿಧಾಸಭಾ ಕ್ಷೇತ್ರದಾದ್ಯಂತ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ.ಪ್ರಮುಖವಾಗಿ ಕಾಲೋನಿಗಳ ಮನೆಗಳಿಗೆ ನೀರಿನ ಸಮಸ್ಯೆ ತೀವೃಗೊಂಡಿದ್ದು ಸ್ಥಳೀಯಾಡಳಿತಗಳು ಹರಸಾಹಸಪಟ್ಟು ನಿಗದಿತ ಪ್ರಮಾಣದಲ್ಲಿ ನೀರು ಸರಬರಾಜು ಮಾಡುತ್ತಿವೆ. ಈಗಾಗಲೇ ಕಾರ್ಕಳ ತಾಲೂಕಿನ ಇನ್ನಾ,ಕುಕ್ಕುಂದೂರು,ಮರ್ಣೆ ಹಾಗೂ ನೀರೆ ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವೃಗೊಂಡಿದ್ದು, ಪಂಚಾಯಿತಿಗಳು ಕಸ ವಿಲೇವಾರಿ ವಾಹನದ ಮೂಲಕ ಮನೆಮನೆಗೆ ನೀರು ಪೂರೈಸುತ್ತಿದೆ.


ಈ ಬಾರಿ ಮುಂಗಾರುಪೂರ್ವ ಮಳೆಯ ಕೊರತೆ ಎದುರಾಗಿದ್ದು, ಇದರ ಜತೆಗೆ ಮುಂಗಾರು ಕೂಡ ವಿಳಂಬವಾಗುತ್ತಿರುವುದು ಸ್ಥಳೀಯಾಡಳಿತಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.ಕುಡಿಯುವ ನೀರಿನ ಸಮಸ್ಯೆ ತಪ್ಪಿಸಲು ಕಾರ್ಕಳ ವಿಧಾಸಭಾ ಕ್ಷೇತ್ರದಲ್ಲಿ ಇನ್ನೂರಕ್ಕೂ ಅಧಿಕ ಕಿಂಡಿ ಅಣೆಕಟ್ಟುಗಳನ್ನು ನಿರ್ಮಾಣ ಮಾಡಿದ್ದರೂ ಹಿಂಗಾರು ಮಳೆ ಅವಧಿಗೂ ಮುನ್ನವೇ ಕೈಕೊಟ್ಟ ಪರಿಣಾಮವಾಗಿ ನೀರಿನ ಒರತೆಯಿಲ್ಲದೇ ಮಾರ್ಚ್ ಅಂತ್ಯದೊಳಗೆ ನೀರು ಸಂಪೂರ್ಣ ಬರಿದಾಗಿದೆ.ಇದಲ್ಲದೇ ಕೃಷಿ ಭೂಮಿಗೆ ಹೇರಳವಾಗಿ ನೀರಿನ ಬಳಕೆಯಿಂದ ಈ ಬಾರಿ ಬೇಗನೇ ಕುಡಿಯುವ ನೀರಿನ ಅಭಾವ ತಲೆದೋರಿದೆ. ಕಳೆದ ವರ್ಷ ರಾಜ್ಯಾದ್ಯಂತ ಬಹುತೇಕ ಜಿಲ್ಲೆಗಳಲ್ಲಿ ಮುಂಗಾರು ಮಳೆ ಭರ್ಜರಿಯಾಗಿ ಸುರಿದಿದ್ದರೂ ಶೇಕಡಾವಾರು ಮಳೆ ಪ್ರಮಾಣ ಕಡಿಮೆಯಾಗಿತ್ತು.ಇದಲ್ಲದೇ ಕೊಳವೆ ಬಾವಿಗಳನ್ನು ಕೊರೆಯುವ ಕಾರಣದಿಂದ ಅಂತರ್ಜಲಮಟ್ಟ ಗಣನೀಯವಾಗಿ ಕುಸಿಯುತ್ತಿರುವ ಕಾರಣದಿಂದಾಗಿ ನೀರಿನ ಒರತೆ ಪಾತಾಳಕ್ಕೆ ತಲುಪಿದೆ.ಖಾಸಗಿ ವ್ಯಕ್ತಿಗಳು ಅನುಮತಿಯಿಲ್ಲದೇ ಬೇಕಾಬಿಟ್ಟಿ ಕೊರೆಯುವ ಕೊಳವೆ ಬಾವಿಗಳಿಗೆ ಸರ್ಕಾರ ಲಗಾಮು ಹಾಕಿ ಕೃಷಿ ಜಮೀನುಗಳಲ್ಲಿ ಇಂಗು ಗುಂಡಿಗಳನ್ನು ರಚನೆಗೆ ಹೆಚ್ಚಿನ ಆದ್ಯತೆ ನೀಡಿದ್ದಲ್ಲಿ ಅಣತರ್ಜಲ ವೃದ್ಧಿಗೆ ಬಹಳ ಉಪಯುಕ್ತವಾಗಲಿದೆ.


ಒಟ್ಟಿನಲ್ಲಿ ಚುನಾವಣೆ ಮುಗಿದು ಎರಡು ವಾರ ಕಳೆದರೂ ಜನರಿಗೆ ಮಾತ್ರ ಕುಡಿಯುವ ನೀರಿನ ಬವಣೆ ತಪ್ಪಿಲ್ಲ.ಒಂದೆಡೆ ಉರಿಬಿಸಿಲಿನ ತಾಪಮಾನ ಇನ್ನೊಂದೆಡೆ ಕುಡಿಯುವ ನೀರಿಗೆ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

Leave a Reply

Your email address will not be published. Required fields are marked *