ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು 2022 – 2023ನೇ ಸಾಲಿನ ನಾಡೋಜ ಡಾ. ಮನು ಬಳಿಗಾರ್ ಸ್ಥಾಪಿಸಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಪ್ರಶಸ್ತಿ’ ಪ್ರಕಟಗೊಂಡಿದೆ.
ದತ್ತಿ ದಾನಿಗಳ ಸೂಚನೆಯ ಮೇರೆಗೆ 2022ನೇ ಸಾಲಿನ ನಾಡೋಜ ಡಾ. ಮನು ಬಳಿಗಾರ್ ಸ್ಥಾಪಿಸಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಪ್ರಶಸ್ತಿ’ಗೆ ಹಿರಿಯ ಲೇಖಕಿ ಶ್ರೀಮತಿ ವಸುಮತಿ ಉಡುಪ ಹಾಗೂ ಲೇಖಕ ಪ್ರೊ. ಮಲ್ಲಿಕಾರ್ಜುನ ಹಿರೇಮಠ ಅವರನ್ನು ಆಯ್ಕೆ ಮಾಡಲಾಗಿದೆ. 2023ನೆಯ ಸಾಲಿನ ಪ್ರಶಸ್ತಿಗೆ ಹಿರಿಯ ಲೇಖಕಿ ಡಾ. ಬಿ. ಟಿ. ಲಲಿತಾ ನಾಯಕ್ ಹಾಗೂ ಲೇಖಕ ಡಾ. ಅಮರೇಶ ನುಗಡೋಣಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ. ಡಾ.ಮಹೇಶ ಜೋಶಿ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಒಬ್ಬ ಲೇಖಕ ಹಾಗೂ ಒಬ್ಬ ಲೇಖಕಿಗೆ ಪ್ರತಿವರ್ಷ ಪರಿಷತ್ತಿನ ಮೂಲಕ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ .ನಾಡೋಜ ಡಾ. ಮನು ಬಳಿಗಾರ್ ಸ್ಥಾಪಿಸಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಪ್ರಶಸ್ತಿ’ಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ನಾಡೋಜ ಡಾ. ಮನು ಬಳಿಗಾರ ಅವರು ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ಅಧ್ಯಕ್ಷರಿಗೆ ನೀಡುವ ಮಾಸಿಕ ಗೌರವ ಸಂಭಾವನೆಯನ್ನು ಪರಿಷತ್ತಿನಲ್ಲಿಯೇ ದತ್ತಿ ನಿಧಿ ರೂಪದಲ್ಲಿ ಸ್ಥಾಪಿಸಿದ್ದಾರೆ.12,61,000 ( ಹನ್ನೆರಡು ಲಕ್ಷದ ಅರವತ್ತೊಂದು ಸಾವಿರ)ರೂ. ಗಳ ಖಾಯಂ ದತ್ತಿನಿಧಿಯನ್ನು ಸ್ಥಾಪಿಸಿರುತ್ತಾರೆ.
ಪ್ರತಿವರ್ಷ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಒಬ್ಬ ಲೇಖಕ ಹಾಗೂ ಲೇಖಕಿಗೆ ತಲಾ 30,000 (ಮೂವತ್ತು ಸಾವಿರ)ರೂ. ನಗದು, ಸ್ಮರಣಿಕೆ, ಹಾರ ಹಾಗೂ ಫಲತಾಂಬೂಲ ನೀಡಿ ಗೌರವಿಸಲಾಗುತ್ತದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ನಾಡೋಜ ಡಾ. ಮನು ಬಳಿಗಾರ, ವಿಮರ್ಶಕಿ ಡಾ. ಎಂ. ಎಸ್. ಆಶಾದೇವಿ, ಪರಿಷತ್ತಿನ ಗೌರವ ಕಾರ್ಯದರ್ಶಿ ಶ್ರೀ, ನೇ. ಭ. ರಾಮಲಿಂಗ ಶೆಟ್ಟಿ, ಡಾ. ಪದ್ಮಿನಿ ನಾಗರಾಜು ಹಾಗೂ ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಂ.ಪಟೇಲ್ ಪಾಂಡು ಉಪಸ್ಥಿತರಿದ್ದರು.