ಮಂಗಳೂರು : ಮಂಗಳೂರು ವಿಮಾನ ನಿಲ್ದಾಣದಿಂದ ದುಬೈಗೆ ಹಾರಲು ಟೇಕಾಫ್ ಆಗುತ್ತಿದ್ದ ವಿಮಾನಕ್ಕೆ ಹಕ್ಕಿಯೊಂದು ಡಿಕ್ಕಿ ಹೊಡೆದ ಪರಿಣಾಮ ಅಪಾಯವರಿತ ಪೈಲಟ್ ವಿಮಾನ ಟೇಕಾಫ್ ರದ್ದುಪಡಿಸಿದ್ದರಿಂದ ಭಾರೀ ಅವಘಡ ಕೂದಲೆಳೆಯ ಅಂತರದಿಂದ ತಪ್ಪಿದಂತಾಗಿದೆ.
ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂಡಿಗೋ ವಿಮಾನವು ಗುರುವಾರ ಮುಂಜಾನೆ 8.30ರ ವೇಳೆಗೆ ದುಬೈನತ್ತ ತೆರಳಲು ಪ್ರಯಾಣಿಕರನ್ನು ಹೊತ್ತು ಟೇಕಾಫ್ ಗೆ ಸಿದ್ದವಾಗಿತ್ತು.ಪೈಲಟ್ ವಿಮಾನವನ್ನು ಟೇಕಾಫ್ ಮಾಡಲು ರನ್ ವೇನಲ್ಲಿ ವೇಗವಾಗಿ ಚಾಲನೆ ಮಾಡುತ್ತಿದ್ದಾಗ ಏಕಾಎಕಿ ಹಕ್ಕಿಯೊಂದು ವಿಮಾನದ ರೆಕ್ಕೆಗೆ ಬಡಿದಿದೆ.ತಕ್ಷಣವೇ ಎಚ್ಚೆತ್ತ ಪೈಲಟ್ ನಿಲ್ದಾಣದ ಎಟಿಸಿಗೆ ಮಾಹಿತಿ ನೀಡಿದ್ದಾರೆ. ಇನ್ನೇನು ಟೇಕಾಫ್ ಆಗುವ ಹಂತದಲ್ಲಿದ್ದ ವಿಮಾನವನ್ನು ರನ್ ವೇನಲ್ಲಿ ನಿಲ್ಲಿಸಿ, ಹಾರಾಟವನ್ನು ರದ್ದುಪಡಿಸಲಾಯಿತು.ಪೈಲಟ್ ಸಮಯಪ್ರಜ್ಞೆಯಿಂದ ಭಾರೀ ಅವಘಡದಿಂದ ಇಂಡಿಗೋ ವಿಮಾನ ಪಾರಾಗಿದೆ.ವಿಮಾನದ ಸಿಬ್ಬಂದಿ ಪ್ರಯಾಣಿಕರನ್ನು ಇಳಿಸಿ ವಿಮಾನವನ್ನು ತಪಾಸಣೆ ಮಾಡಿದ್ದಾರೆ.
ಈ ಘಟನೆಯ ಬಳಿಕ ತಕ್ಷಣವೇ ಬೆಂಗಳೂರಿನಿಂದ ಬಂದಿದ್ದ ಮತ್ತೊಂದು ವಿಮಾನದ ಮೂಲಕ ಪ್ರಯಾಣಿಕರಿಗೆ ದುಬೈಗೆ ತೆರಳಲು ಅಧಿಕಾರಿಗಳು ವ್ಯವಸ್ಥೆ ಮಾಡಿದ್ದಾರೆ.ಈ ಘಟನೆಯಿಂದ ಕೆಲ ಕಾಲ ಮಂಗಳೂರು ಏರ್ಪೋರ್ಟ್ನಲ್ಲಿ ಆತಂಕದ ವಾತಾವರಣ ಮೂಡಿತ್ತು.ಈ ಘಟನೆಯಿಂದ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಕಳೆದ 2010ರ ಮೇ 22 ರಂದು ವಿಮಾನವೊಂದು ಲ್ಯಾಂಡಿಂಗ್ ಆಗುವ ವೇಳೆ ಪ್ರಪಾತಕ್ಕೆ ಬಿದ್ದು ಹೊತ್ತಿ ಉರಿದು 150ಕ್ಕೂ ಅಧಿಕ ಪ್ರಯಾಣಿಕರು ದಾರುಣವಾಗಿ ಬಲಿಯಾಗಿರುವ ಕರಾಳ ಘಟನೆ ನಡೆದಿತ್ತು.