Share this news

ವರದಿ: ಕರಾವಳಿನ್ಯೂಸ್ ಡೆಸ್ಕ್

ಕಾರ್ಕಳ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅಧಿಕಾರದ ಅವಧಿ ಏಪ್ರಿಲ್ 27ಕ್ಕೆ ಮುಕ್ತಾಯಗೊಂಡಿದೆ.ಈ ನಡುವೆ ವಿಧಾನಸಭೆ ಚುನಾವಣೆ ಸಂದರ್ಭದಲ್ಲೇ ಅಧ್ಯಕ್ಷ,ಉಪಾಧ್ಯಕ್ಷರ ಅವಧಿ ಮುಗಿದಿದ್ದರೂ ಚುನಾವಣಾ ಆಯೋಗದ ನೀತಿ ಸಂಹಿತೆ ಅಡ್ಡಿಯಾಗಿದ್ದ ಹಿನ್ನಲೆಯಲ್ಲಿ ಆಡಳಿತಾಧಿಕಾರಿ ನೇಮಕಕ್ಕೂ ಹಿನ್ನಡೆಯಾಗಿತ್ತು.ಆಯೋಗದ ಈ ನಿಲುವಿನಿಂದ ತುರ್ತು ಸೇವೆಗಳು ಹೊರತುಪಡಿಸಿ ಉಳಿದೆಲ್ಲಾ ಸರ್ಕಾರಿ ಸೇವೆಗಳಲ್ಲಿ ವ್ಯತ್ಯಯವಾಗಿತ್ತು. ಇದೀಗ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿರುವ ಹಿನ್ನಲೆಯಲ್ಲಿ ಅಧ್ಯಕ್ಷ,ಉಪಾಧ್ಯಕ್ಷ ಚುನಾವಣೆಗೆ ಶೀಘ್ರವೇ ದಿನಾಂಕ ನಿಗದಿಪಡಿಸುವ ಲಕ್ಷಣಗಳು ಗೋಚರಿಸುತ್ತಿದೆ.


ಕಾರ್ಕಳ ಪುರಸಭೆಯ 23 ಸ್ಥಾನಗಳ ಪೈಕಿ ಕಾಂಗ್ರೆಸ್-ಬಿಜೆಪಿ ತಲಾ 11 ಸ್ಥಾನಗಳು ಪಡೆದಿದ್ದು ಒಂದು ಸ್ಥಾನ ಪಕ್ಷೇತರ ಪಾಲಾಗಿದೆ.ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಬಿಜೆಪಿ ಸಮಬಲದ ಹೋರಾಟ ನೀಡುತ್ತಾ ಬಂದಿದ್ದು,ಎರಡನೇಯ ಅವಧಿಗೆ ನಡೆಯಲಿರುವ ಅಧ್ಯಕ್ಷ,ಉಪಾಧ್ಯಕ್ಷ ಚುನಾವಣೆಯಲ್ಲಿ ಅಧಿಕಾರ ಯಾರ ಪಾಲಾಗಲಿದೆ ಎನ್ನುವುದು ಕುತೂಹಲ ಮೂಡಿಸಿದೆ.ಬಹುತೇಕ ಸರ್ಕಾರಗಳು ತಮ್ಮದೇ ಪಕ್ಷಕ್ಕೆ ಅನುಕೂಲವಾಗುವಂತೆ ಮೀಸಲಾತಿ ಪ್ರಕಟಿಸುವುದು ವಾಡಿಕೆ, ಈ ಹಿನ್ನಲೆಯಲ್ಲಿ ಕಾರ್ಕಳದಲ್ಲಿಯೂ ಇಂತಹ ಪ್ರಯೋಗವಾದರೂ ಅಚ್ಚರಿಯಿಲ್ಲ.


ಕಾಂಗ್ರೆಸ್ ಈ ಬಾರಿ ಪುರಸಭೆಯಲ್ಲಿ ಶತಾಯತಗಾಯ ಅಧಿಕಾರ ಹಿಡಿಯಬೇಕೆಂಬ ಗುರಿಹೊಂದಿದ್ದು, ಇದನ್ನು ಸಾಧಿಸಬೇಕಿದ್ದರೆ ಮೀಸಲಾತಿಯೂ ಬಹುಮುಖ್ಯ ಪಾತ್ರವಹಿಸಲಿದೆ.ಈ ನಿಟ್ಟಿನಲ್ಲಿ ಕಾಂಗ್ರೆಸ್ ಕೂಡ ತಂತ್ರಗಾರಿಕೆ ಹಣೆಯುವಲ್ಲಿ ಸಮರ್ಥವಾಗಿದೆ.ಇನ್ನು ಮೀಸಲಾತಿ ವಿಚಾರವನ್ನು ಗಮನಿಸುವುದಾದರೆ,ಕಾಂಗ್ರೆಸ್ ನಲ್ಲಿ ಪರಿಶಿಷ್ಟ ಜಾತಿ(ಮಹಿಳೆ) ಹಾಗೂ ಪರಿಶಿಷ್ಟ ಪಂಗಡ(ಸಾಮಾನ್ಯ) ಈ ಎರಡು ಸ್ಥಾನಗಳು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಇರುವುದರಿಂದ,ಒAದವೇಳೆ ಈ ಕೆಟಗರಿಯಲ್ಲಿ ಮೀಸಲಾತಿ ಪ್ರಕಟವಾದಲ್ಲಿ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾಗಲಿದೆ.ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ(ಮಹಿಳೆ) ಮೀಸಲಾದರೆ ಕಾಂಗ್ರೆಸ್ ಪಕ್ಷದ ಪ್ರತಿಮಾ ರಾಣೆಗೆ ಅವಕಾಶ ಸಿಗಲಿದೆ, ಆದರೆ ಈ ಹಿಂದೆ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮೀಸಲಾತಿ ಬಂದಿರುವ ಕಾರಣದಿಂದ ಈ ಬಾರಿ ಮತ್ತೆ ಮೀಸಲಾತಿ ಪುನರಾವರ್ತನೆಯಾಗುವ ಸಾಧ್ಯತೆ ಕಡಿಮೆಯಿದೆ.ಒಂದೊಮ್ಮೆಮೀಸಲಾತಿ ಪರಿಶಿಷ್ಟ ಪಂಗಡದ ಪಾಲಾದರೆ ಕಾಂಗ್ರೆಸ್ ಪಕ್ಷದಿಂದ ಮೆರಿಣಾಪುರ ವಾರ್ಡಿನ ಸೋಮನಾಥ ನಾಯ್ಕ್ ಅವರಿಗೆ ಅಧ್ಯಕ್ಷ ಪಟ್ಟ ಒಲಿಯಬಹುದಾಗಿದೆ.


ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಗೆ ಸಂಖ್ಯಾಬಲವೇ ಪ್ರಮುಖವಾಗಿರುವುದರಿಂದ ಈ ಹಿಂದೆ ಆಡಳಿತದಲ್ಲಿದ್ದ ಬಿಜೆಪಿಯೂ ಕೂಡ ಪ್ರಬಲ ಸ್ಪರ್ಧೆ ನೀಡಲಿದೆ.ಒಂದುವೇಳೆ ಪರಿಶಿಷ್ಟ ಜಾತಿ(ಮಹಿಳೆ) ಹಾಗೂ ಪರಿಶಿಷ್ಟ ಪಂಗಡ ಹೊರತುಪಡಿಸಿ ಉಳಿದ ಯಾವುದೇ ಕೋಟಾದಡಿ ಮೀಸಲಾತಿ ಪ್ರಕಟವಾದಲ್ಲಿ ಅಧಿಕಾರ ಬಿಜೆಪಿಯ ಪಾಲಾಗುವ ಸಾಧ್ಯತೆಯೇ ಹೆಚ್ಚಾಗಿದೆ. ಯಾಕೆಂದರೆ 23 ಸದಸ್ಯ ಬಲದಲ್ಲಿ ತಲಾ 11 ಸ್ಥಾನಗಳನ್ನು ಬಿಜೆಪಿ ಕಾಂಗ್ರೆಸ್ ಹಂಚಿಕೊAಡಿದ್ದು, ಒಂದು ಪಕ್ಷೇತರರ ಪಾಲಾಗಿದೆ.ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಶಾಸಕರ ಹಾಗೂ ಸಂಸದರಿಗೆ ಮತ ಚಲಾಯಿಸಲು ಅವಕಾಶವಿರುವ ಕಾರಣದಿಂದ ಈ ಎರಡು ಮತಗಳು ಸೇರಿ ಬಿಜೆಪಿ 13 ಮತಗಳು ಹಾಗೂ ಕಾಂಗ್ರೆಸ್ ಪಕ್ಷೇತರ ಬೆಂಬಲ ಪಡೆದಲ್ಲಿ ಅದರ ಸಂಖ್ಯಾಬಲ 12 ಮತಗಳಿಗೆ ಸೀಮಿತವಾಗಲಿದೆ.


ಮೇಲಿನ ಎರಡು ಕೆಟಗರಿ ಹೊರತುಪಡಿಸಿ ಪ್ರವರ್ಗ 2ಎ ಅಥವಾ ಸಾಮಾನ್ಯ ಕೋಟಾದಲ್ಲಿ ಮೀಸಲಾತಿ ಬಂದಲ್ಲಿ ಬಿಜೆಪಿಯಿಂದ ಹಿರಿಯಂಗಡಿ-ಕಾಬೆಟ್ಟು ವಾರ್ಡಿನ ಯೋಗಿಶ್ ದೇವಾಡಿಗ ಅವರೇ ಅಧ್ಯಕ್ಷರಾಗುವ ಸಾಧ್ಯತೆಯಿದೆ.ಎರಡನೇ ಅವಧಿಗೆ ಸದಸ್ಯರಾಗಿರುವ ಯೋಗೀಶ್ ದೇವಾಡಿಗ ಅವರಿಗೆ ಆಡಳಿತದ ಅನುಭವ ಹೊಂದಿರುವ ಕಾರಣದಿಂದ ಹಾಗೂ ಪಕ್ಷದ ತಳಮಟ್ಟದ ಸಾಮಾನ್ಯ ಕಾರ್ಯಕರ್ತನಾಗಿರುವ ಕಾರಣದಿಂದ ಮೀಸಲಾತಿ ಬಂದಲ್ಲಿ ಅವಕಾಶ ಸಿಗಬಹುದಾಗಿದೆ.ಇನ್ನುಳಿದಂತೆ ಪ್ರವರ್ಗ 2ಬಿ ಯಲ್ಲಿ ಮೀಸಲಾತಿ ಬಂದಲ್ಲಿ ಅಧ್ಯಕ್ಷ ಸ್ಥಾನ ಮಹಿಳೆಯರ ಪಾಲಾಗಲಿದೆ.ಸಂಖ್ಯಾಬಲದ ಲೆಕ್ಕಾಚಾರದಲ್ಲಿ ಯಾವುದೇ ಮೀಸಲಾತಿ ಬಂದರೂ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಸ್ಥಾನಗಳ ಪೈಕಿ ಒಂದು ಸ್ಥಾನ ಬಿಜೆಪಿ ಪಾಲಾಗುವುದು ಖಚಿತ.
ಈ ಎಲ್ಲಾ ಸಾಧ್ಯತೆಗಳು ಹಾಲಿ ಕಾಂಗ್ರೆಸ್ ಸರ್ಕಾರ ಪ್ರಕಟಿಸುವ ಮೀಸಲಾತಿ ಪಟ್ಟಿಯ ಮೇಲೆ ಅವಲಂಬಿತವಾಗಿದ್ದು,ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಮೀಸಲಾತಿ ಪಟ್ಟಿ ಬಿಡುಗಡೆಯವರೆಗೆ ಕಾಯಲೇಬೇಕಿದೆ.

Leave a Reply

Your email address will not be published. Required fields are marked *