ಮಂಗಳೂರು: ತಾಲೂಕು ಮರಾಠಿ ಸಮಾಜ ಸೇವಾ ಸಂಘ ಗಂಜಿಮಠ ಇದರ 3ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆ, ಭಕ್ತಿಗಾನ, ಮಹಾಸಭೆ, ನಿವೃತ್ತರಿಗೆ ಸನ್ಮಾನ, ಸಾಧಕರಿಗೆ ಅಭಿನಂದನೆ,ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಗರಿಷ್ಠ ಅಂಕ ಗಳಿಸಿದ 11 ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ, ನವ ವಧುವರರಿಗೆ ಶುಭಾಶಯ, ಒಂದರಿAದ ಹತ್ತನೇ ತರಗತಿಯ 152 ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣಾ ಕಾರ್ಯಕ್ರಮ ಸಂಘದ ಸಭಾಭವನದಲ್ಲಿ ನಡೆಯಿತು.
ಕರಾವಳಿ ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿ’ಸೋಜಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದುಡಿಮೆಯ ಸ್ವಲ್ಪ ಅಂಶವನ್ನು ಇದ್ದವರು ಇಲ್ಲದವರಿಗೆ ನೀಡುವ ಮೂಲಕ ಸಮಾಜದ ಜನರ ಕಣ್ಣೀರನ್ನು ಒರೆಸುವುದು ಉತ್ತಮ. ಸಂಘಟನೆಗೆ ವಿಶೇಷ ಶಕ್ತಿ ಇದೆ. ಅದನ್ನು ಇವತ್ತು ಮರಾಠಿ ಸಂಘ ಎಲ್ಲರಿಗೂ ಮಾದರಿಯಾಗುವಂತೆ ಕಾರ್ಯಕ್ರಮ ಸಂಘಟಿಸಿದೆ. ಎಲ್ಲರೂ ಸಂಘಟನಾತ್ಮಕವಾಗಿ ತೊಡಗಿಸಿಕೊಳ್ಳುವ ಮೂಲಕ ಸಂಘಕ್ಕೆ ಶಕ್ತಿ ತುಂಬಿ ನಮ್ಮ ಸಹಕಾರ ಇದೆ ಎಂದು ತಿಳಿಸಿದರು
ಮುಖ್ಯ ಅತಿಥಿಗಳಾಗಿ ಗೀತಾ ಸಾಹಿತ್ಯ ಸಂಭ್ರಮ ಖ್ಯಾತಿಯ ವಿಠ್ಠಲ ನಾಯಕ್ ಮಾತನಾಡಿ, ಮಕ್ಕಳ ಸಂಸ್ಕಾರ ಹೆತ್ತವರ ಸಂಸ್ಕಾರದ ಮೇಲೆ ನಿಂತಿದೆ. ಅವರ ನಡೆ ನುಡಿ ಆಚಾರ ವಿಚಾರ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಒಳ್ಳೆಯ ಚಟುವಟಿಕೆಗಳು ಉನ್ನತಿಯ ಕಡೆಗೆ ಕರೆದೊಯ್ದರೆ, ಅಹಿತ ಚಟುವಟಿಕೆಗಳು ಅವನತಿಯ ಕಡೆಗೆ ಕರೆದೊಯ್ಯುತ್ತವೆ.ಮಕ್ಕಳಿಗೆ ಒಳ್ಳೆಯ ಅಂಕ ಗಳಿಸಲು ಒತ್ತಡ ಹಾಕುವ ಬದಲು ಒಳ್ಳೆಯ ಬದುಕನ್ನು ನಡೆಸಲು ಪ್ರೇರಣೆ ನೀಡಬೇಕು ಎಂದು ವಿವಿಧ ದೃಷ್ಟಾಂತದ ಮೂಲಕ ತಿಳಿಸಿ ಮರಾಠಿ ಸಂಘದ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಜಿಲ್ಲಾ ಮರಾಠಿ ಸಂಘದ ಅಧ್ಯಕ್ಷ ರವಿಪ್ರಸಾದ್ ಶುಭ ಹಾರೈಸಿದರು. ಸಂಘದ ಅಧ್ಯಕ್ಷರಾದ ಯೋಗ ಶಿಕ್ಷಕ ಶೇಖರ ಕಡ್ತಲ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತರಾದ ಮಾಧವ ನಾಯ್ಕ್, ಶೋಭಾ ನಾಯ್ಕ್, ಸರಕಾರಿ ಅಭಿಯೋಜಕರಾಗಿ ಆಯ್ಕೆಯಾದ ಸುಲತಾ ಸಂತೋಷ್, ಬಿ.ಪಾರ್ಮ್ 7ನೇ ರ‍್ಯಾಂಕ್ ವಿನುತಾ ನಾಯ್ಕ್ ರಿಗೆ ಗೌರವಿಸಿ ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಕೇಶವ ನಾಯ್ಕ್, ರಾಜೀವಿ ನಾಯ್ಕ್, ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ಒಡ್ಡೂರು, ಪುರಂದರ ನಾಯ್ಕ್ ಉಪಸ್ಥಿತರಿದ್ದರು. ಸಂಘ ಗೌರವಾಧ್ಯಕ್ಷ ವಿ.ಪಿ ನಾಯ್ಕ್ ಸ್ವಾಗತಿಸಿದರು. ಕಾರ್ಯದರ್ಶಿ ಅಶೋಕ ನಾಯ್ಕ್ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು. ನಾರಾಯಣ ನಾಯ್ಕ್ ವಂದನಾರ್ಪಣೆ ಗೈದರು. ನಿವೇದಿತಾ ಮತ್ತು ಶ್ರಾವ್ಯ ನಿರೂಪಿಸಿ, ನಾರಾಯಣ ನಾಯ್ಕ್ ವಂದಿಸಿದರು. ನಿತೇಶ್ ಕುಮಾರ್ ಮತ್ತು ಬಳಗ ಭಕ್ತಿಗಾನ ಕಾರ್ಯಕ್ರಮ ನಡೆಸಿಕೊಟ್ಟರು