ಕಾರ್ಕಳ:ದೈಹಿಕ ಆರೋಗ್ಯ ಹಾಗೂ ಒತ್ತಡ ನಿವಾರಣೆಗೆ ಯೋಗಾಭ್ಯಾಸ ಹಾಗೂ ಪ್ರಾಣಾಯಾಮ ಅತ್ಯಂತ ಮಹತ್ವದ ಪಾತ್ರ ವಹಿಸಲಿದೆ.ಈ ನಿಟ್ಟಿನಲ್ಲಿ ಜೂನ್ 2 ರಂದು ಹೆಬ್ರಿ ತಾಲೂಕಿನ ವರಂಗ ಜೈನ ಬಸದಿಯಲ್ಲಿ ಒಂದು ಯೋಗ ಒಂದು ಜಗತ್ತು ಪರಿಕಲ್ಪನೆಯಡಿ ಜೂನ್ 2 ರಂದು ಯೋಗ ಮಹೋತ್ಸವ ಆಯೋಜಿಸಲಾಗಿದೆ ಎಂದು ಧರ್ಮಸ್ಥಳ ಮಂಜುನಾಥೇಶ್ವರ ಪ್ರಾಕೃತಿಕ ಚಿಕಿತ್ಸಾ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ಪ್ರಶಾಂತ್ ಶೆಟ್ಟಿ ಹೇಳಿದರು.
ಅವರು ಬುಧವಾರ ಕಾರ್ಕಳ ಪ್ರಕಾಶ್ ಹೊಟೇಲ್ ಸಭಾಂಗಣದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ,ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಯೋಗ ಮಹೋತ್ಸವ ಉದ್ಘಾಟಿಸಲಿದ್ದು, ಕಾರ್ಕಳ ಶಾಸಕ ಸುನಿಲ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಧರ್ಮಸ್ಥಳ ಮಂಜುನಾಥೇಶ್ವರ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ಡಾ.ಸತೀಶ್ಚಂದ್ರ ,ವಿಶೇಷ ಆಹ್ವಾನಿತರಾಗಿ ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್,ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರಾ ಉಪಸ್ಥಿತರಿರಲಿದ್ದಾರೆ ಎಂದರು.
ಭಾರತೀಯ ಯೋಗ ಪರಂಪರೆಯನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ನಮ್ಮ ದೇಶಕ್ಕೆ ಸಲ್ಲುತ್ತದೆ.ಪ್ರಧಾನಿ ನರೇಂದ್ರ ಮೋದಿ ಹಾಗೂ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಪ್ರಯತ್ನದಿಂದ ಜೂನ್ 21 ರಂದು ಇಡೀ ವಿಶ್ವವೇ ಯೋಗ ದಿನಾಚರಣೆಯನ್ನು ಆಚರಿಸುತ್ತಿದೆ. ಸಧೃಡ ದೈಹಿಕ ಆರೋಗ್ಯಕ್ಕಾಗಿ ಯೋಗಾಸನ ಎಷ್ಟು ಅವಶ್ಯವೋ ಮಾನಸಿಕ ಆರೋಗ್ಯಕ್ಕೆ ಪ್ರಾಣಾಯಾಮ ಕೂಡ ಮುಖ್ಯ ಎಂದರು.
ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.ಆದ್ದರಿಂದ ಗ್ರಾಮೀಣ ಪ್ರದೇಶದಲ್ಲಿಯೂ ಯೋಗದ ಮಹತ್ವವನ್ನು ತಿಳಿಸಬೇಕಿದೆ. ಈ ನಿಟ್ಟಿನಲ್ಲಿ ಯೋಗ ದಿನಾಚರಣೆ ಅಂಗವಾಗಿ ಯೋಗ ಮಹೋತ್ಸವವನ್ನು ಆಚರಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ವರಂಗ ಜೈನ ಬಸದಿಯ ಮ್ಯಾನೇಜರ್ ಯುವರಾಜ ಆರಿಗ,ಡಾ.ಶಶಿಕಾಂತ್ ಜೈನ್,ಉದಯ ಸುಬ್ರಹ್ಮಣ್ಯ ,ಡಾ.ಶಿವಪ್ರಸಾದ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು