Share this news

ಬೆಂಗಳೂರು : ವಿಧಾನಸಭೆ ಚುನಾವಣೆಯ ಸೋಲಿನ ಬಳಿಕ ಎಚ್ಚೆತ್ತುಕೊಂಡಿರುವ ಬಿಜೆಪಿ ಲೋಕಸಭೆ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ.ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಾಲಿ 25 ಸಂಸದರ ಪೈಕಿ ಹಾಲಿ 12 ಕ್ಕೂ ಹೆಚ್ಚು ಸಂಸದರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ದಟ್ಟವಾಗಿದೆ.


ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕನಿಷ್ಟ 20 ರಿಂದ 25 ಸ್ಥಾನಗಳನ್ನು ಗೆಲ್ಲಲೇಬೇಕೆಂದು ಪಣತೊಟ್ಟಿರುವ ಬಿಜೆಪಿ ಹಾಲಿ 12 ಕ್ಕೂ ಹೆಚ್ಚು ಸಂಸದರಿಗೆ ಕೋಕ್ ನೀಡಲಿದೆ ಎನ್ನಲಾಗಿದೆ. ಇದರಲ್ಲಿ ಕೆಲವರಿಗೆ ಅನಾರೋಗ್ಯ ಹಾಗೂ ವಯಸ್ಸಿನ ಕಾರಣದಿಂದ ಟಿಕೆಟ್ ಕೈ ತಪ್ಪಲಿದ್ದರೆ, ಇನ್ನೂ ಕೆಲವರಿಗೆ ಪಕ್ಷದ ಸಂಘಟನೆಯಲ್ಲಿ ಆಸಕ್ತಿಯಿಲ್ಲದ ಕಾರಣಕ್ಕಾಗಿ ಟಿಕೆಟ್ ನೀಡದೇ ಇರುವ ಸಾಧ್ಯತೆ ಇದೆ.


ಪ್ರಮುಖವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಹಾಲಿ ದಕ್ಷಿಣ ಕನ್ನಡದ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಪಕ್ಷದ ಕಾರ್ಯಕರ್ತರೇ ತಿರುಗಿಬಿದ್ದ ಹಿನ್ನೆಲೆಯಲ್ಲಿ ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸೋಲಿಗೆ ಕಟೀಲು ಅವರೇ ಕಾರಣವೆಂದು ಆರೋಪಿಸಿ ಹಿಂದೂ ಸಂಘಟನೆಯ ಕಾರ್ಯಕರ್ತರು ಕಟೀಲ್ ವಿರುದ್ಧ ತೀವೃ ಆಕ್ರೋಶ ಹೊರಹಾಕಿದ್ದರು. ಈ ಎಲ್ಲಾ ಬೆಳವಣಿಗೆ ಗಮನಿಸಿದ ಹೈಕಮಾಂಡ್ ಈ ಬಾರಿ ನಳಿನ್ ಕುಮಾರ್ ಕಟೀಲು ಅವರಿಗೆ ಟಿಕೆಟ್ ನೀಡದಿರಲು ತೀರ್ಮಾನಿಸಿದೆ ಎನ್ನಲಾಗಿದೆ.

ಇದಲ್ಲದೇ ದಾವಣಗೆರೆಯ ಸಂಸದ ಜಿ.ಎಂ.ಸಿದ್ದೇಶ್ವರ್, ಹಾವೇರಿಯ ಶಿವಕುಮಾರ್ ಉದಾಸಿ, ತುಮಕೂರು ಜಿ.ಎಸ್. ಬಸವರಾಜು, ಚಾಮರಾಜನಗರ ಶ್ರೀನಿವಾಸ್ ಪ್ರಸಾದ್, ಉತ್ತರ ಕನ್ನಡದ ಅನಂತ್ ಕುಮಾರ್ ಹೆಗಡೆ, ಬೆಂಗಳೂರು ಉತ್ತರ ಸದಾನಂದಗೌಡ, ವಿಜಯಪುರ ರಮೇಶ್ ಜಿಗಜಿಣಗಿ, ಕೊಪ್ಪಳದ ಸಂಗಣ್ಣ ಕರಡಿ, ಬಳ್ಳಾರಿ ದೇವೇಂದ್ರಪ್ಪ, ಬೆಳಗಾವಿ ಮಂಗಳಾ ಅಂಗಡಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *