Share this news

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ 5 ಗ್ಯಾರಂಟಿಗಳ ಅನುಷ್ಠಾನದ ವಿವರಗಳನ್ನು ಪ್ರಕಟಿಸಿದ ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಸರ್ಕಾರದ ನಿಜ ಬಣ್ಣ ಬಯಲಾಗಿದೆ ಸರ್ಕಾರ 200 ಯುನಿಟ್ ವಿದ್ಯುತ್ ಫ್ರೀಯಾಗಿ ನೀಡದು ಎಂದು ಹೇಳಿದ ಬೊಮ್ಮಾಯಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಘೋಷಣೆಯಲ್ಲಿ ಹಿಡನ್ ಅಜೆಂಡಾ ಇದೆ ಎಂದು ಹೇಳಿದರು.

ಚುನಾವಣೆ ಪೂರ್ವದಲ್ಲಿ ಜನರಿಗೆ ಬಹಳಷ್ಟು ಭರವಸೆ ತೋರಿಸಿ ಚುನಾವಣೆ ಗೆದ್ದ ಕಾಂಗ್ರೆಸ್ ಪಕ್ಷದ ಚುನಾವಣೆ ಪೂರ್ವ ಮಾತಿಗೂ ಚುನಾವಣೆ ನಂತರದ ಮಾತಿಗೂ ಬಹಳ ವ್ಯತ್ಯಾಸ ಇದೆ. ಎಲ್ಲರಿಗೂ 200 ಯುನಿಟ್ ವಿದ್ಯುತ್ ಫ್ರೀ ಎಂದು ಹೇಳಿದ್ದಾರೆ. ಗ್ಯಾರೆಂಟಿ ಕಾರ್ಡ್ ನಲ್ಲಿಯೂ ಅದೇ ರೀತಿ ಹೇಳಿದ್ದಾರೆ. ಒಂದು ಮನೆಯಲ್ಲಿ 70 ಯೂನಿಟ್ ಅಥವಾ 80 ಯೂನಿಟ್ ಬಳಕೆ ಮಾಡಬಹುದು. 200 ಯೂನಿಟ್ ಬಳಕೆ ಮಾಡಿದರೆ ಉಚಿತ ಕೊಡಬೇಕು. ಆದರೆ, ಇವತ್ತಿನ ಮುಖ್ಯಮಂತ್ರಿಗಳ ಮಾತಿನಲ್ಲಿ ವ್ಯತ್ಯಾಸ ಇದೆ ಎಂದರು.

ಈಗ ಸಿಎಂ ವಾರ್ಷಿಕ ಸರಾಸರಿ ಲೆಕ್ಕ ಹಾಕಿ ಉಚಿತ ಕೊಡುವುದಾಗಿ ಹೇಳುತ್ತಾರೆ. ಇದು ಇವರ ಹಿಡನ್ ಅಜೆಂಡಾ ಆಗಿದೆ. ಇದರಿಂದ ಸರಾಸರಿ 120 ರಿಂದ 125 ಯೂನಿಟ್ ವ್ಯತ್ಯಾಸವಾಗುತ್ತದೆ. ಸರಾಸರಿ ಬಳಕೆ ಲೆಕ್ಕ ಹಾಕುವುದು ಹಿಡನ್ ಅಜೆಂಡಾ. ಇವರು ಗ್ಯಾರೆಂಟಿಯಲ್ಲಿ ದೋಖಾ ಮಾಡುತ್ತಿದ್ದಾರೆ. ಅನ್ನಭಾಗ್ಯದಲ್ಲಿ ಹೆಚ್ಚುವರಿ ಐದು ಕೆ.ಜಿ ಮಾತ್ರ ಕೊಡುವುದು, ಕೇಂದ್ರ ಸರ್ಕಾರ ಆಹಾರ ಭದ್ರತೆ ಕಾಯ್ದೆಯಡಿ 5 ಕೆ.ಜಿ ಅಕ್ಕಿ ಕೊಡುತ್ತಿದೆ. ನಮ್ಮ ರಾಜ್ಯದಲ್ಲಿ ಐದು ಕೆ.ಜಿ ಅಕ್ಕಿಯ ಜೊತೆಗೆ ಒಂದು ಕೆ.ಜಿ ರಾಗಿ ಒಂದು ಕೆ.ಜಿ ಜೋಳ ಕೊಡುತ್ತಿದ್ದೇವೆ. ಅದನ್ನು ಮುಂದುವರೆಸುತ್ತಾರೋ ಇಲ್ಲವೋ ಸ್ಪಷ್ಟವಾಗಿಲ್ಲ ಎಂದರು.

ಗೃಹಲಕ್ಷ್ಮಿ ಯೋಜನೆಯಲ್ಲೂ ಧೋಖಾ ಇದೆ. ಬಡವರ ಮನೆಯಲ್ಲಿ ಹಿರಿಯ ಮಹಿಳೆಯರಿರುತ್ತಾರೆ. ಅವರಿಗೆ ಆನ್ ಲೈನ್ ಅರ್ಜಿ ಹಾಕಲು ಹೇಳಿ ಅವರಿಗೆ ಯೋಜನೆ ಲಾಭ ಸಿಗದಂತೆ ಮಾಡುವ ಹುನ್ನಾರ ಅಡಗಿದೆ. ಎಲ್ಲ ಪಂಚಾಯತಿಗಳಲ್ಲಿ ಪಿಡಿಒಗಳಿದ್ದಾರೆ. ಅವರ ಮೂಲಕ ಮಾಹಿತಿ ಸಂಗ್ರಹಿಸಿ ಕೊಡಬೇಕಿತ್ತು. ಅರ್ಜಿ ಹಾಕಲು ಒಂದು ತಿಂಗಳು, ಪ್ರಕ್ರಿಯೆ ಮಾಡಲು ಒಂದು ತಿಂಗಳು ಕಾಲಹರಣ ಮಾಡುವ ಲೆಕ್ಕ ಇದರಲ್ಲಿ ಅಡಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರವೇ ಎಲ್ಲರ ಮನೆಗಳಿಗೆ ಹೋಗಿ ಮಾಹಿತಿ ಪಡೆದು ಯೋಜನೆ ಜಾರಿ ಮಾಡಬೇಕು. ಇನ್ನು ಎಸಿ ಬಸ್ಸು, ಲಗ್ಜುರಿ ಬಸ್ ಇಲ್ಲ ಅಂತ ಹೇಳಿದ್ದಾರೆ. ಕೆಂಪು ಬಸ್ ಮಾತ್ರ ಗ್ಯಾರೆಂಟಿ ಆಯಿತು ಎಂದರು.

ಯುವ ನಿಧಿ ಯೋಜನೆಯನ್ನು 2022-23 ಪಾಸಾದ ಡಿಗ್ರಿ ಹೋಲ್ಡರ್ಸ್ ಗಳಿಗೆ ಕೊಡುವುದಾಗಿ ಹೇಳುತ್ತಾರೆ. ಡಿಗ್ರಿ ಮುಗಿಸಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ತೆರಳುತ್ತಾರೆ. ಹೀಗಾಗಿ ಹೆಚ್ಚಿನ ನಿರುದ್ಯೋಗಿಗಳಿಗೆ ಅನುಕೂಲ ಆಗುವುದಿಲ್ಲ. ಮತ್ತೆ ಈ ಯೋಜನೆಗಳ ಜಾರಿಗೆ ಎಷ್ಟು ಖರ್ಚಾಗುತ್ತದೆ ಎನ್ನುವುದನ್ನು ಹೇಳಿಲ್ಲ ಎಂದರು.

ಶಾಲಾ ಕಟ್ಟಡ ನಿರ್ಮಾಣ, ಆಸ್ಪತ್ರೆ ನಿರ್ಮಾಣ, ನೀರಾವರಿ ಯೋಜನೆಗಳನ್ನು ನಿಲ್ಲಿಸುತ್ತೀರಾ ? ಎಸ್ಸಿಪಿ ಟಿಎಸ್ ಪಿ ಯೋಜನೆ ಹಣ ಬಳಸುತ್ತೀರಾ ? ಕೇಂದ್ರದ ಅನುದಾನಕ್ಕೆ ರಾಜ್ಯದ ಪಾಲಿನ ಹಣ ನೀಡುವುದನ್ನು ನಿಲ್ಲಿಸುತ್ತೀರಾ ಎಂದು ಪ್ರಶ್ನಿಸಿದರು. ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ 6800 ಕೋಟಿ ಮೀಸಲಿಟ್ಟಿದ್ದೇವೆ. ಅದನ್ನು ಏನು ಮಾಡುತ್ತಾರೆ. ಯಾವ ಯೋಜನೆಗಳನ್ನು ಸ್ಥಗಿತಗೊಳಿಸುತ್ತಾರೆ, ಎಲ್ಲಿಂದ ಹಣ ತರುತ್ತಾರೆ ಎನ್ನುವುದನ್ನು ತಿಳಿಸಿಲ್ಲ ಎಂದರು.

ಸರ್ಕಾರ ಹೆಚ್ಚಿನ ಆದಾಯ ತರದೇ ಇರುವ ಹಣವನ್ನೇ ಖರ್ಚು ಮಾಡಿದರೆ, ರಾಜ್ಯ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದೆ. ನಮ್ಮ ರಾಜ್ಯ ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ ರಾಜ್ಯವಾಗಿದೆ. ಈಗಿರುವ ಆರ್ಥಿಕ ಪರಿಸ್ಥಿತಿ ಸರಿಯಾಗಿ ನಿರ್ವಹಣೆ ಮಾಡದೇ ಹೋದರೆ, ಆರ್ಥಿಕ ಹೊರೆ ಬೀಳಲಿದೆ. ಇವರು ಯಾವ ರೀತಿಯ ಸಾಲ ಪಡೆಯುತ್ತಾರೆ ಎನ್ನುವುದು ಸ್ಪಷ್ಟವಾಗಬೇಕು. ಇವರು ತಾವು ಮಾಡುವ ಯೋಜನೆಗಳಿಂದ ರಾಜ್ಯವನ್ನು ಆರ್ಥಿಕ ಸಂಕಷ್ಟಕ್ಕೆ ನೂಕುವ ಕೆಲಸ ಮಾಡಬಾರದು. ಅವರ ಮಾತು ಕೇಳಿದರೆ ಮಾತಿಗೆ ತಪ್ಪಿದ್ದಾರೆ. ಹೇಳುವುದೊಂದು ಮಾಡುವುದೊಂದು ಮಾಡಿದ್ದಾರೆ. ರಾಜ್ಯದ ಜನತೆ ಇದೆಲ್ಲವನ್ನು ಗಮನಿಸುತ್ತಿದ್ದಾರೆ. ರಾಜ್ಯದ ಜನರ ನಿರೀಕ್ಷೆಗಳು ಹುಸಿಯಾಗಿವೆ ಎಂದರು.

Leave a Reply

Your email address will not be published. Required fields are marked *