ಕಾರ್ಕಳ : ಕಾಪು ತಾಲೂಕಿನ ಪಿಲಾರು ಗ್ರಾಮದ ನಿವಾಸಿ ಮೂಲತಃ ತಮಿಳುನಾಡಿನ ಮಣಿ ಎಂಬವರ ಅಣ್ಣ ಮುರುಗ ಎಂಬವರು ಕಳೆದ 3 ತಿಂಗಳ ಹಿಂದೆ ಕಲ್ಲಿನ ಕೋರೆಯಲ್ಲಿ ಕೆಲಸಕ್ಕೆಂದು ಹೋದವರು ಮನೆಗೆ ಬಾರದೇ ನಾಪತ್ತೆಯಾಗಿದ್ದರು.
ಮುರುಗ ನಾಪತ್ತೆಯಾದ ಬಳಿಕ ಜೂ.3ರಂದು ರಿಕ್ಷಾದಲ್ಲಿ ಮರುಗ ಅವರನ್ನು ಕರೆದುಕೊಂಡಯ ಬಂದಿದ್ದ ವ್ಯಕ್ತಿಯೊಬ್ಬರು ಮುರುಗರವರು ಜಾರ್ಕಳದಲ್ಲಿ ವಾಸವಿದ್ದು ಅಲ್ಲಿ ಅಸ್ವಸ್ಥರಾಗಿದ್ದರೆಂದು ಹೇಳಿ ಮರುಗ ಅವರ ಮನೆಯಾದ ಪಿಲಾರಿಗೆ ಬಿಟ್ಟು ಹೋಗಿದ್ದರು.ಅಸ್ವಸ್ಥರಾಗಿ ರಾತ್ರಿ ಮನೆಲ್ಲಿಯೇ ಮಲಗಿದ್ದ ಮುರುಗ ಅವರನ್ನು ಮರುದಿನ ಬೆಳಿಗ್ಗೆ ಚಿಕಿತ್ಸೆಗಾಗಿ ಶಿರ್ವದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಫಲಿಸದೇ ಜೂನ್ 5 ಸೋಮವಾರ ಮೃತಪಟ್ಟಿದ್ದರು.
ಮರುಗ ಅವರು ವಿಪರೀತ ಮದ್ಯಸೇವನೆ ಮಾಡಿ ಮೃತಪಟ್ಟಿರಬಹುದೆಂದು ಅವರ ಸಹೋದರ ಅಣ್ಣಿ ಶಂಕೆ ವ್ಯಕ್ತಪಡಿಸಿದ್ದರು. ಆದರೆ ಮೃತ ಮುರುಗ ಅವರು ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ನನಗೆ ಹೊಡೆದು ಹಲ್ಲೆ ಮಾಡಿದ್ದಾರೆ ಎಂದು ವೈದ್ಯರಿಗೆ ಹೇಳಿಕೆ ನೀಡಿದ್ದರು.ಆದರೆ ಯಾರು ಹಲ್ಲೆ ನಡೆಸಿದ್ದಾರೆ ಎನ್ನುವ ಮಾಹಿತಿ ನೀಡದ ಹಿನ್ನಲೆಯಲ್ಲಿ ಈ ಘಟನೆ ಕಾರ್ಕಳ ತಾಲೂಕಿನಲ್ಲಿ ನಡೆದಿರುವ ಸಾಧ್ಯತೆಯಿದ್ದು, ಮರುಗ ಅವರಿಗೆ ಹಲ್ಲೆ ನಡೆಸಿದ್ದರಿಂದ ಮೃತಪಟ್ಟಿರಬಹುದೆಂದು ಮೃತರ ಸಹೋದರ ಅಣ್ಣಿ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮರುಗ ಅವರನ್ನು ಕರೆತಂದವರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದು ಮುರುಗ ಅವರ ಸಾವಿಗೆ ಕಾರಣ ಏನಿರಬಹುದೆಂದು ತನಿಖೆಗೆ ಮುಂದಾಗಿದ್ದಾರೆ.