ನವದೆಹಲಿ: ಗೋ ಹತ್ಯೆ ನಿಷೇಧ ಕಾಯ್ದೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದ ಕರ್ನಾಟಕ ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ಗೆ ಕಾಂಗ್ರೆಸ್ ಹೈಕಮಾಂಡ್ ಗುರುವಾರ ಛೀಮಾರಿ ಹಾಕಿದ್ದು, ಮಿತಿಯಲ್ಲಿರುವಂತೆ ಎಚ್ಚರಿಕೆ ನೀಡಿದೆ. ‘ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಗೋಹತ್ಯೆ ನಿಷೇಧ ಕಾಯ್ದೆಯನ್ನು ಕಾಂಗ್ರೆಸ್ ಸರ್ಕಾರ ಪುನರ್ ಪರಿಶೀಲನೆ ನಡೆಸಲಿದೆ. ಎಮ್ಮೆ, ಕೋಣಗಳನ್ನೇ ಹತ್ಯೆ ಮಾಡುತ್ತೇವೆ. ಹಾಗಿದ್ದಾಗ ಹಸುಗಳನ್ನು ಏಕೆ ಕಡಿಯಬಾರದು?’ ಎಂದು ಸಚಿವ ವೆಂಕಟೇಶ್ ಕಳೆದ ಶನಿವಾರ ಪ್ರಶ್ನೆ ಮಾಡಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು.

ಬಿಜೆಪಿ ಇದನ್ನು ರಾಷ್ಟ್ರಮಟ್ಟದಲ್ಲಿ ಪ್ರಸ್ತಾಪ ಮಾಡಿ ಕಾಂಗ್ರೆಸ್ ಅನ್ನು ಪ್ರಶ್ನಿಸಿತ್ತು. ಗುರುವಾರ ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ‘ನಿಮ್ಮದೇ ಸಚಿವಾಲಯದ ಅಡಿಯಲ್ಲಿ ಬರುವ ಅಂಶಗಳ ಬಗ್ಗೆ ಗಮನ ಕೊಡಿ. ಕಾಯ್ದೆ ರೂಪಿಸುವುದು ಹಾಗೂ ರದ್ದು ಮಾಡುವುದು ನಿಮ್ಮ ವ್ಯಾಪ್ತಿಗೆ ಬರಲ್ಲ. ಹೀಗಾಗಿ ನಿಮ್ಮ ವ್ಯಾಪ್ತಿಗೆ ಬರದ ನೀತಿಗಳ ಬಗ್ಗೆ ನಿರ್ಧಾರ ಪ್ರಕಟಿಸಬೇಡಿ ಎಂದು ಹಾಗೂ ಮಿತಿಯಲ್ಲಿರಿ. ನಾವು (ಸರ್ಕಾರದ ಪ್ರಮುಖರು) ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಸಚಿವರಿಗೆ ಸೂಚಿಸಲಾಗಿದೆ’ ಎಂದು ಸುರ್ಜೇವಾಲಾ ಹೇಳಿದ್ದಾರೆ.


