ಬೆಂಗಳೂರು: ಕಾಂಗ್ರೆಸ್ ಸರ್ಕಾರ ಐದು ಉಚಿತ ಗ್ಯಾರೆಂಟಿ ಗೊಂದಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ಕಾಂಗ್ರೆಸ್ ಗೃಹಲಕ್ಷ್ಮಿ ಯೋಜನೆಯ ಷರತ್ತಿನಲ್ಲಿ ಮತ್ತೆ ಬದಲಾವಣೆ ಮಾಡಲಾಗಿದೆ. ನಿನ್ನೆ ಮಕ್ಕಳು ತೆರಿಗೆ ಕಟ್ಟಿದರೆ, ತಾಯಿ ಅಥವಾ ಆ ಕುಟುಂಬ ಗೃಹ ಲಕ್ಷ್ಮಿ ಯೋಜನೆ ಫಲಾನುಭವಿಗಳಾಗಲು ಸಾಧ್ಯವಿಲ್ಲ ಎಂದಿತ್ತು. ಇಂದು ಮತ್ತೆ ಷರತ್ತು ಬದಲಿಸಲಾಗಿದೆ. ಇಂದು ಮಕ್ಕಳು ತೆರಿಗೆ ಕಟ್ಟಿದರೂ, ತಾಯಿ 2,000 ರೂಪಾಯಿ ಪಡೆಯಲು ಅರ್ಹರಾಗಿದ್ದಾರೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

ಮಕ್ಕಳು ತೆರಿಗೆ ಕಟ್ಟುತ್ತಿದ್ದರೂ, ಗೃಹಲಕ್ಷ್ಮಿ ಯೋಜನೆ ತಾಯಿಗೆ 2,000 ರೂಪಾಯಿ ನೀಡಲಾಗುತ್ತದೆ. ಈ ಕುರಿತು ಗೊಂದಲ ಸೃಷ್ಟಿಯಾಗಿತ್ತು. ಈ ಗೊಂದಲ ಪರಿಹರಿಸಲಾಗಿದೆ ಎಂದು ಹೆಬ್ಬಾಳ್ಕರ್ ಹೇಳಿದ್ದಾರೆ. ಇದೇ ವೇಳೆ ಗೃಹಲಕ್ಷ್ಮಿ ಫಾರ್ಮ್ ಕುರಿತು ಸ್ಪಷ್ಟನೆ ನೀಡಿದ್ದಾರೆ. ಗೃಹಲಕ್ಷ್ಮಿ ಫಾರ್ಮ್ ಓಡಾಡ್ತಿರೋದು ಅಸಲಿ. ಇದರಲ್ಲಿ ಕೆಲವೊಂದು ಬದಲಾವಣೆ ಮಾಡಿದ್ದೇವೆ. ಇನ್ನೂ ಕೆಲ ಬದಲಾವಣೆ ಮಾಡಲಾಗುತ್ತದೆ ಎಂದು ಹೆಬ್ಬಾಳ್ಕರ್ ಹೇಳಿದ್ದಾರೆ.

ಬ್ಯಾಂಕ್ ಪಾಸ್ ಬುಕ್ ಸೇರಿಸಲಾಗುತ್ತದೆ. ಜಾತಿ ಬದಲು ವರ್ಗ ಎಂದು ಹಾಕುತ್ತೇವೆ. ತಪ್ಪು ಸಂದೇಶ ಹೋಗಬಾರದು ಅನ್ನೋ ಕಾರಣಕ್ಕೆ ಈ ಬದಲಾವಣೆಗಳನ್ನು ಮಾಡಲಾಗುತ್ತದೆ. ಹೊಸ ಷರತ್ತಿನ ಪ್ರಕಾರ ಗಂಡ ತೆರಿಗೆ ಕಟ್ಟುತ್ತಿದ್ದರೆ, ಮನೆಯ ಯಜಮಾನಿಗೆ ಗೃಹ ಲಕ್ಷ್ಮಿ ಯೋಜನೆ ಅನ್ವಯವಾಗುವುದಿಲ್ಲ. ಆದರೆ ಮಕ್ಕಳು ತೆರಿಗೆ ಕಟ್ಟಿದರೆ ತಾಯಿಗೆ ಯೋಜನೆ ಫಲಾನುಭವಿಯಾಗಲು ಅರ್ಹ ಎಂದು ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.


