Share this news

ಕಾರ್ಕಳ :ವಿಧಾನಸಭೆಯಲ್ಲಿ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತು ಈವರೆಗೂ ತನ್ನ ನಾಯಕನನ್ನು ಆಯ್ಕೆ ಮಾಡುವ ಕನಿಷ್ಟ ಸಾಮರ್ಥ್ಯ ಇಲ್ಲದ ಬಿಜೆಪಿಗೆ ಕಾಂಗ್ರೆಸ್ ಸರಕಾರದ ಗ್ಯಾರಂಟಿಗ ಯೋಜನೆಗಳ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ ಹೇಳಿದ್ದಾರೆ.

ವಿದ್ಯುತ್ ಬಿಲ್ ಯೂನಿಟ್ ಗೆ 70 ಪೃಸೆ ಹೆಚ್ಚಳ ಮಾಡಿರುವುದು ಹಿಂದಿನ ಬಿಜೆಪಿ ಸರ್ಕಾರ. 2022-23ನೇ ವರ್ಷದ ಇಂಧನ ಹೊಂದಾಣಿಕೆ ಶುಲ್ಕ, ಆರ್ಥಿಕ ಕ್ರೋಢೀಕರಣದ ಗುರಿಯೊಂದಿಗೆ ರಾಜ್ಯದ 5 ಎಸ್ಕಾಂಗಳು ಈ ವರ್ಷಾರಂಭದಲ್ಲಿ ಸಲ್ಲಿಸಿದ ಬೇಡಿಕೆಯಂತೆ ಕರ್ನಾಟಕ ವಿದ್ಯುತ್ ತ್ ನಿಯಂತ್ರಣ ಆಯೋಗ ಎಪ್ರಿಲ್ 1ರಿಂದಲೇ ಪೂರ್ವಾನ್ವಯವಾಗುವಂತೆ ಮೇ 8ರಂದು ಈ ಪ್ರಸ್ತಾವನೆಯನ್ನು ಅನುಮೋದಿಸಿ ಮೇ 12ರಂದು ಆದೇಶಿಸಿತ್ತು. ಆಗ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರಲಿಲ್ಲ. ಆದರೆ 200 ಯೂನಿಟ್ ಉಚಿತ ವಿದ್ಯುತ್ ಹಾಗೂ ಇತರ ಗ್ಯಾರಂಟಿಗಳ ವಿರುದ್ದ ಅಪಪ್ರಚಾರ ಮಾಡುತ್ತಲೇ ಇರುವ ಬಿಜೆಪಿ ಈ ವಿದ್ಯುತ್ ದರ ಏರಿಕೆಯನ್ನು ಕಾಂಗ್ರೆಸ್ಸಿನ ತಲೆಗೆ ಕಟ್ಟಲು ನೋಡಿ ತಾನು ಜನ ವಿರೋಧಿ ಎಂಬುದನ್ನು ಸಾಬೀತುಪಡಿಸುತ್ತಿದೆ ಎಂದು ಆರೋಪಿಸಿದ್ದಾರೆ

ಇತ್ತೀಚಿನ ವರದಿಯಂತೆ ರಾಜ್ಯದ ಈ ಎಲ್ಲ ಉಚಿತ ಯೋಜನೆಗಳಿಗೆ ಬೇಕಿರುವುದು ಸುಮಾರು 53ರಿಂದ 56ಸಾವಿರ ಕೋಟಿ ರೂ. ಈ ಉಚಿತ ಯೋಜನೆಯ ಗ್ಯಾರಂಟಿಯಿಂದ ದೇಶ ದಿವಾಳಿಯಾಗುತ್ತದೆ ಎನ್ನುತ್ತಿರುವ ಬಿಜೆಪಿ ನಾಯಕರಿಗೆ ದೇಶದ 6.25ಲಕ್ಷ ಕೋಟಿಯ ಉದ್ಧಿಮೆಯನ್ನು ಖಾಸಗಿಯವರಿಗೆ ನೀಡಿದಾಗ, ದೇಶದ ಬೃಹತ್ ಉದ್ಧಿಮೆದಾರರಿಗೆ 2.25ಲಕ್ಷ ಕೋಟಿ ರೂ. ತೆರಿಗೆ ವಿನಾಯತಿ ನೀಡಿದಾಗ, ಬೃಹತ್ ಉದ್ದಿಮೆದಾರರ ಸುಮಾರು 10 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದಾಗ, ತಮ್ಮ ವೈಯಕ್ತಿಕ ಪ್ರತಿಷ್ಟೆಗಾಗಿ ಅನಗತ್ಯ ಯೋಜನೆಗಳಿಗಾಗಿ ಕೋಟಿಗಟ್ಟಲೆ ಹಣ ವ್ಯಯಿಸಿದಾಗ ಮತ್ತು ನಮ್ಮ ಆರ್ಥಿಕ ಶಕ್ತಿಯನ್ನು ಮೀರಿ ಅನ್ಯರಾಷ್ಟ್ರಗಳಿಗೆ ನಮ್ಮ ಜನರ ತೆರಿಗೆಯ ಹಣವನ್ನು ಸಾಲದ ರೂಪದಲ್ಲಿಯೋ ಅನುಧಾನದ ರೂಪದಲ್ಲಿಯೋ ನೀಡಿದಾಗ ದಿವಾಳಿಯಾಗದ ಈ ದೇಶ, ರಾಜ್ಯವೊಂದು ಬಡವರಿಗಾಗಿ ತನ್ನ ಆದಾಯದಲ್ಲಿ 56 ಸಾವಿರ ಕೋಟಿ ರೂ. ವೆಚ್ಚದ ಜನಪರ ಉದಾರ ಯೋಜನೆಯೊಂದನ್ನು ಹಮ್ಮಿಕೊಂಡಾಗ ದಿವಾಳಿಯಾಗಲು ಸಾಧ್ಯವಿಲ್ಲ ಎನ್ನುವ ಪರಿಜ್ಞಾನ ಇಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.

ಈಗ ತಾನೆ ಅಧಿಕಾರ ಹಿಡಿದ ರಾಜ್ಯ ಸರಕಾರದ ಉಚಿತ ಯೋಜನೆಗಳನ್ನು ಠೀಕಿಸುವವರು ಈ ಹಿಂದಿನ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ ನೀಡಿದ ಯಶಸ್ವಿ ಆಡಳಿತ, ಆರ್ಥಿಕ ನೀತಿ ಮತ್ತು ಅಂದು ಜಾರಿಗೆ ತಂದ ಯೋಜನೆಗಳ ಬಗ್ಗೆ ಅವಲೋಕನ ಮಾಡಿಕೊಳ್ಳಲಿ. ಬಿಜೆಪಿಯವರು ಸೋಲಿನಿಂದ ಧೃತಿಗೆಟ್ಟು ಸುಳ್ಳು ಹೇಳಿಕೆಗಳ ಮೂಲಕ ಜನರ ದಿಕ್ಕು ತಪ್ಪಿಸುತ್ತೇವೆ ಎಂಬ ಭ್ರಮೆಯನ್ನು ಬಿಟ್ಟು , ತಾಕತ್ತಿದ್ದರೆ ಈ ಉಚಿತ ಜನಪರ ಯೋಜನೆಗಳು ಬೇಕೇ ಬೇಡವೇ ಎಂಬುದನ್ನು ಜನರ ಮುಂದೆ ನೇರವಾಗಿ ಹೇಳಲಿ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್‌ಚಂದ್ರ ಪಾಲ್ ಸವಾಲು ಹಾಕಿದ್ದಾರೆ

Leave a Reply

Your email address will not be published. Required fields are marked *