ಬೆಳ್ತಂಗಡಿ:ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್ ಪಕ್ಷ ಐದು ಗ್ಯಾರೆಂಟಿಗಳನ್ನು ಘೋಷಿಸಿತ್ತು. ಇದೀಗ ಸರಕಾರ ಬಂದಿದೆ ಆದ್ದರಿಂದ ನಮ್ಮ ಸರ್ಕಾರ ನುಡಿದಂತೆ ಐದು ಗ್ಯಾರೆಂಟಿಗಳನ್ನು ಮೊದಲ ಕ್ಯಾಬಿನೆಟ್‌ನಲ್ಲೆ ಘೋಷಿಸಿದೆ. ಮಹಿಳೆಯರ ಆಶೋತ್ತರಗಳನ್ನು ಈಡೇರಿಸುವಲ್ಲಿ ಮೊದಲ ಶಕ್ತಿ ಯೋಜನೆ ಕಾರ್ಯಪ್ರವೃತ್ತವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್ ಹೇಳಿದರು.
ಅವರು ಜೂ.11 ರಂದು ಬೆಳ್ತಂಗಡಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಕಾಂಗ್ರೆಸ್ ಪಕ್ಷದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ನುಡಿದಂತೆ ನಡೆಯುವ ಪಕ್ಷ ಕಾಂಗ್ರೆಸ್ ಎಂಬುದನ್ನು ಮತ್ತೊಮ್ಮೆ ನಿಜವಾಗಿಸಿದ್ದೇವೆ. ಮಹಿಳೆಯರು ಜಿಲ್ಲಾ ಕಚೇರಿ, ತಾಲೂಕು ಕಚೇರಿಗಳಿಗೆ ಓಡಾಡಲು ಅನುಕೂಲ ಕಲ್ಪಿಸುವ ನೆಲೆಯಲ್ಲಿ ಈ ಯೋಜನೆ ಮಹತ್ವ ಪಡೆದಿದೆ. ಮೂರು ತಿಂಗಳಲ್ಲಿ ಸ್ಮಾರ್ಟ್ ಕಾರ್ಡ್ ನೀಡಲಾಗುವುದು. ಅಲ್ಲಿಯವರೆಗೆ ಆಧಾರ್ ಕಾರ್ಡ್ ಅಥವಾ ಓಟರ್ ಐಡಿ ಅಥವಾ ಸರ್ಕಾರದ ಯಾವುದಾರೊಂದು ಗುರುತಿನ ಚೀಟಿ ಬಳಸಿ ರಾಜ್ಯಾದ್ಯಂತ ಮಹಿಳೆಯರು ಉಚಿತವಾಗಿ ಪ್ರಯಾಣ ಬೆಳೆಸಬಹುದು ಎಂದ ಅವರು ಇದಕ್ಕೆ ಅವಕಾಶ ಕಲ್ಪಿಸಿಕೊಟ್ಟ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ತಹಶೀಲ್ದಾರ್ ಸುರೇಶ್ ಕುಮಾರ್ ಟಿ. ಮಾತನಾಡಿ, ಸರಕಾರ ತಂದ ಶಕ್ತಿ ಯೋಜನೆಯಿಂದ ಮಧ್ಯಮ ವರ್ಗದ ಸಹಿತ ಎಲ್ಲ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ. ನಾಗರಿಕರು ಯೋಜನೆಯನ್ನು ಸದ್ಬಳಸಿಕೊಂಡು ಸುಸ್ತಿರ ಸಮಾಜಕ್ಕೆ ನಮ್ಮದು ಕೊಡುಗೆ ನೀಡೋಣ ಎಂದು ಶುಭಹಾರೈಸಿದರು.
ಮಾಜಿ ಶಾಸಕ ಕೆ.ವಸಂತ ಬಂಗೇರ ಕಾರ್ಯಕ್ರಮಕ್ಕೆ ದೀಪ ಬೆಳಗಿ ಚಾಲನೆ ನೀಡಿದರು.
ತಾಲೂಕು ಕಾರ್ಯನಿರ್ವಾಹಣಾಧಿಕಾರಿ ಕುಸುಮಾರ್ ಬಿ., ಕೆ.ಎಸ್.ಆರ್.ಟಿ.ಸಿ. ಪುತ್ತೂರು ವಿಬಾಗೀಯ ನಿಯಂತ್ರಣಾಧಿಕಾರಿ ಬಿ.ಜಯಕರ ಶೆಟ್ಟಿ,ಧರ್ಮಸ್ಥಳ ಕೆ.ಎಸ್.ಆರ್.ಟಿ.ಸಿ. ಘಟಕ ವ್ಯವಸ್ಥಾಪಕ ಉದಯ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಪುತ್ತೂರು ವಿಭಾಗೀಯ ಸಂಚಲನಾಧಿಕಾರಿ ಮುರಳೀಧರ್ ಆಚಾರ್ಯ ಪ್ರಾಸ್ತಾವಿಸಿದರು. ಧರ್ಮಸ್ಥಳ ಡಿಪೋ ಸಿಬಂದಿ ಮೇಲ್ವಿಚಾರಕ ರವಿ ಕಾರ್ಯಕ್ರಮ ನಿರೂಪಿಸಿದರು.