Share this news

ಉಡುಪಿ: ಇತ್ತೀಚಿನ ದಿನಗಳಲ್ಲಿ ಯಾವುದೇ ಸೇವಾಮನೋಭಾವದಿಂದ ಮಾಡುವ ಸಮಾಜಮುಖಿ ಕೆಲಸಗಳಿಗೂ ಪ್ರಚಾರ ಬಯಸದೇ ಇರುವವರು ಬಹಳ ವಿರಳ.ಆದರೆ ಇದಕ್ಕೆ ಅಪವಾದ ಎಂಬಂತೆ ಉಡುಪಿ ಜಿಲ್ಲೆಯಲ್ಲಿ ಬೈರಂಪಳ್ಳಿ ಎಂಬ ಗ್ರಾಮದ ಯುವಕನೋರ್ವ ಕೇವಲ ಸೇವಾ ಮನೋಭಾವದಿಂದ ಯಾವುದೇ ಪ್ರಚಾರ ಅಥವಾ ಪ್ರಶಸ್ತಿಯ ಹಂಗಿಲ್ಲದೇ ಕಳೆದ 20 ವರ್ಷಗಳಿಂದ ಎಲೆಮರೆಯ ಕಾಯಿ ಎಂಬಂತೆ ಬಡವರ,ಅಶಕ್ತರ ದೀನದಲಿತರ ಕಷ್ಟಕ್ಕೆ ಸದ್ದಿಲ್ಲದೇ ಶ್ರಮಿಸುತ್ತಿರುವ ಶ್ರಮಿಕನ ಸಾಧನೆಗೆ ದೆಹಲಿ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಮಾಡಿದೆ.


ಉಡುಪಿ ಜಿಲ್ಲೆಯ ಪೆರ್ಡೂರು ಸಮೀಪದ ಬೈರಂಪಳ್ಳಿ ಗ್ರಾಮದ ಸಂತೋಷ್ ಕುಮಾರ್ ತನ್ನ ವೈಯುಕ್ತಿಕ ಜೀವನದ ಜತೆಜತೆಗೆ ಸಮಾಜಸೇವೆಯನ್ನೇ ಕಾಯಕವನ್ನಾಗಿಸಿ ಆ ಮೂಲಕ ಬಡವರ,ಆಶಕ್ತರ ಕಣ್ಣೀರೊರೆಸಿದ ಬಡವರ ಪಾಲಿನ ಶ್ರಮಿಕನಾಗಿದ್ದಾರೆ. ಸಂಘಟನೆ, ಹೋರಾಟದ ಹಿನ್ನಲೆಯಿಂದ ಬಂದ ಸಂತೋಷ್ ಕುಮಾರ್ ಬಾಲ್ಯದಿಂದಲೂ ಸೇವಾಮನೋಭಾವನೆಯನ್ನು ಮೈಗೂಡಿಸಿಕೊಂಡು ಬೆಳೆದವರು. ಸರ್ಕಾರದಿಂದ ಸೂಕ್ತ ವೈದ್ಯಕೀಯ ಚಿಕಿತ್ಸೆ ಸಿಗದ ಬಡವರ,ವಿಕಲಚೇತರ,ಅನಾರೋಗ್ಯಪೀಡಿತರ ಚಿಕಿತ್ಸೆಗೆ ಸ್ಪಂದಿಸುವ ಮೂಲಕ ಸಮಾಜದಲ್ಲಿ ವಿಭಿನ್ನರಾಗಿ ಗುರುತಿಸಿಕೊಂಡಿದ್ದಾರೆ. ತನ್ನ ವ್ಯವಹಾರದಲ್ಲಿ ಗಳಿಸುವ ಲಾಭದಲ್ಲಿ ಸಮಾಜಕ್ಕೆ ಸ್ವಲ್ಪ ಎನ್ನುವ ಮನೋಭಾವದಿಂದ `ಶ್ರಮಿಕ ತರುಣರ ತಂಡ ಸೇವಾ ಟ್ರಸ್ಟ್’ ಎನ್ನುವ ಸಂಸ್ಥೆ ಆರಂಭಿಸಿ ನೂರಾರು ಬಡವರ,ನಿರ್ಗತಿಕರ ಪಾಲಿಗೆ ಆಸರೆಯಾಗಿದ್ದಾರೆ.


ಇದಲ್ಲದೇ ಶ್ರಮಿಕ ಸೇವಾ ಟ್ರಸ್ಟ್ ಮೂಲಕ ಉಡುಪಿ ಜಿಲ್ಲೆಯ ವಿವಿಧ ಕಡೆಯ ತೀರಾ ದುರ್ಬಲ ವರ್ಗದವರಿಗೆ 25 ಲಕ್ಷ ವೆಚ್ಚದಲ್ಲಿ 8 ಮನೆಗಳನ್ನು ನಿರ್ಮಿಸಿ ನೆಮ್ಮದಿಯ ಸೂರು ಕಲ್ಪಿಸಿ ಮಾದರಿಯಾಗಿದ್ದಾರೆ.ಇದಲ್ಲದೇ ಶೌಚಾಲಯರಹಿತ 22 ಕುಟುಂಬಗಳಿಗೆ ಶೌಚಾಲಯ ನಿರ್ಮಾಣ, ಬಡ ರೋಗಿಗಳ ಚಿಕಿತ್ಸೆಗಾಗಿ ಆಯುಷ್ಮಾನ್ ಭಾರತ್ ಯೋಜನೆಯಡಿ 1.42 ಕೋಟಿ ರೂ ವೈದ್ಯಕೀಯ ನೆರವು ಒದಗಿಸಿಕೊಡಲು ಶ್ರಮಿಕ ಸೇವಾ ಟ್ರಸ್ಟ್ ನ ಯುವಕರು ಶ್ರಮಿಸಿದ್ದಾರೆ, ಅಲ್ಲದೇ ಕೊರೋನಾ ಸಂಕಷ್ಟ ಕಾಲದಲ್ಲಿ ಆರೋಗ್ಯ ಸಿಬ್ಬಂದಿಗಳ ನೆರವಿಗೆ ಧಾವಿಸಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಕೋವಿಡ್ ಸಂದಿಗ್ದ ಕಾಲದಲ್ಲಿ ಬಡವ ಕುಟುಂಬಗಳಿಗೆ ಬರೋಬ್ಬರಿ 4 ಟನ್ ಅಕ್ಕಿ, 1800 ದಿನಸಿ ಕಿಟ್ ವಿತರಿಸಿ ಶ್ರಮಿಕ ತರುಣರ ತಂಡ ಸೇವಾ ಟ್ರಸ್ಟ್ ಬಡವರ ಹಸಿವು ನೀಗಿಸಿದೆ.

ಇದಲ್ಲದೇ ಕರ್ತವ್ಯನಿರತ ನಿರತ ವೈದ್ಯಕೀಯ ಸಿಬ್ಬಂದಿಗಳಿಗೆ ಉಚಿತ ಊಟೋಪಚಾರ ವ್ಯವಸ್ಥೆ ಕಲ್ಪಿಸುವ ಮೂಲಕ ಸಂತೋಷ್ ಕುಮಾರ್ ಅವರ ತಂಡವು ಸರ್ಕಾರದ ಜತೆಗೂ ಕೈಜೋಡಿಸಿ ಮಾದರಿ ಎನಿಸಿದೆ. ಇದಕ್ಕೂ ಮಿಗಿಲಾಗಿ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿ ನಿಂದ ಮೃತಪಟ್ಟ ಸುಮಾರು 223 ಶವಸಂಸ್ಕಾರವನ್ನು ಸ್ವತಃ ಸಂತೋಷ್ ಕುಮಾರ್ ಬೈರಂಪಳ್ಳಿಯವರ ನೇತೃತ್ವದಲ್ಲಿ ಹಾಗೂ ಅವರ ತರುಣರ ತಂಡವು ನಿರ್ವಹಿಸಿ ಭಾರೀ ಪ್ರಶಂಸೆಗೆ ಪಾತ್ರರಾಗಿದ್ದಾರೆ.


ಇದಲ್ಲದೇ ಪ್ರತೀ ವರ್ಷ ಆಯ್ದ ಒಂದು ಬಡಕುಟುಂಬಕ್ಕೆ ಗೋದಾನ ಮಾಡುವ ಮೂಲಕ ಬದುಕಿಗೆ ಆಸರೆಯಾಗಿದ್ದಾರೆ.ಸಾರ್ವಜನಿಕ ಬದುಕಿನಲ್ಲಿ ಬಡವರ,ಅಶಕ್ತರ ಪಾಲಿಗೆ ಬೆಳಕಾಗಬೇಕೆಂಬ ನಿಟ್ಟಿನಲ್ಲಿ ಅಂದು ಸಂತೋಷ್ ಕುಮಾರ್ ಅವರು ಸ್ಥಾಪಿಸಿರುವ ಶ್ರಮಿಕ ತರುಣರ ತಂಡ ಸೇವಾ ಟ್ರಸ್ಟ್ ಇಂದು ನೂರಾರು ಯುವಕರ ಪರಿಶ್ರಮದ ಫಲವಾಗಿ ಉಡುಪಿ ಜಿಲ್ಲೆಯಲ್ಲಿ ಹೆಮ್ಮರವಾಗಿ ಬೆಳೆದು‌ ನಿರಂತರ ಸೇವಾಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ.


ಸಮಾಜಸೇವೆಯ ಮೂಲಕ ಜನಪ್ರಿಯವಾಗಬೇಕೆಂಬ ಉದ್ದೇಶವಿಲ್ಲದೇ ಪ್ರಚಾರದ ಭರಾಟೆಯೂ ಇಲ್ಲದೇ ಸಂತೋಷ್ ಕುಮಾರ್ ಅವರು ನಡೆಸುತ್ತಿರುವ ಸೇವಾಕೈಂಕರ್ಯವನ್ನು ಗುರುತಿಸಿದ ದೆಹಲಿಯ ಪ್ರತಿಷ್ಟಿತ ವಿಶ್ವವಿದ್ಯಾನಿಲಯವು ಗ್ಲೋಬಲ್ ಹ್ಯೂಮನ್ ಪೀಸ್ ಯುನಿವರ್ಸಿಟಿ ವತಿಯಿಂದ ನೀಡಲಾದ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಿದೆ.
ಪ್ರಶಸ್ತಿ,ಹೊಗಳಿಕೆಗಳು,ಪ್ರತಿಫಲವನ್ನು ನಿರೀಕ್ಷೆ ಮಾಡದೇ ಸೇವೆ ಎಂಬ ಯಜ್ಞದಲ್ಲಿ ಸಮಿದೆಯಂತೆ ಉರಿಯುವ ಎನ್ನುವ ನಾಣ್ನುಡಿಯಂತೆ ಡಾ.ಸಂತೋಷ್ ಕುಮಾರ್ ಬಡವರ,ಅಶಕ್ತರ ಪಾಲಿನ ಆಶಾಕಿರಣವಾಗುವ ಮೂಲಕ ಸಮಾಜದಲ್ಲಿ ಮಾದರಿ ಎನಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *