Share this news

ಕಾರ್ಕಳ : ಗೋವಿನಿಂದ ಗ್ರಾಹಕನವರೆಗೆ ಶ್ರೇಷ್ಠ ಗುಣಮಟ್ಟವನ್ನು ಕಾಯ್ದುಕೊಂಡು ನಂದಿನಿ ಲಕ್ಷಾಂತರ ಗ್ರಾಹಕರ ಮನೆ ಮನಗಳನ್ನು ಮುಟ್ಟಿ ಶ್ರೇಷ್ಠತೆಯ ಸಂಕೇತವಾಗಿದೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಲು ಒಕ್ಕೂಟವು ದಿನಂಪ್ರತಿ 4.5ಲಕ್ಷ ಲೀಟರ್ ಗಿಂತಲೂ ಹೆಚ್ಚಿನ ಹಾಲನ್ನು ಸಂಗ್ರಹಿಸುತ್ತಿದ್ದು, ಹಾಲು ಮತ್ತು ಹಾಲಿನ ಉತ್ಪನ್ನಗಳ ಗುಣಮಟ್ಟವನ್ನು ನಿರಂತರವಾಗಿ ಕಾಯ್ದುಕೊಂಡು ಬರುತ್ತಿದೆ ಎಂದು ದ .ಕ .ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷರಾದ ಕೆ.ಪಿ ಸುಚರಿತ ಶೆಟ್ಟಿ ಹೇಳಿದರು.

ಅವರು ಗುರುವಾರ ಕಾರ್ಕಳ ಅನಂತಶಯನದಲ್ಲಿ ನೂತನ ನಂದಿನಿ ಮಾರಾಟ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಕಳ ನಗರದಲ್ಲಿ ಐದನೇ ನಂದಿನಿ ಫ್ರಾನ್ಚೈಸಿ ಅನಂತಶಯನ ರಸ್ತೆಯಲ್ಲಿ ಎಸ್. ಎಸ್. ಕಾಂಪ್ಲೆಕ್ಸ್ ಬಳಿಯಲ್ಲಿ ಉದ್ಘಾಟನೆ ಗೊಳ್ಳುತ್ತಿದ್ದು, ಉಡುಪಿ ಜಿಲ್ಲೆಯ 27ನೇ ಫ್ರಾಂಚೈಸಿಯಾಗಿ, ಬೆಳೆಯುತ್ತಿರುವ ಕಾರ್ಕಳ ನಗರದ ಜನತೆಗೆ ನಂದಿನಿ ಉತ್ಪನ್ನಗಳನ್ನು ನಿರಂತರವಾಗಿ ಪೂರೈಸಲಿದೆ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿದ್ದ ಕಾರ್ಕಳ ಕ್ರೈಸ್ಟ್ ಕಿಂಗ್ ಚರ್ಚ್ ನ ಧರ್ಮ ಗುರುಗಳಾದ ರೆವರೆಂಡ್ ಫಾದರ್ ಕ್ಲೆಮಂಟ್ ಮಸ್ಕರೇನಸ್ ಸಾಂಪ್ರದಾಯಿಕ ಪ್ರಾರ್ಥನೆಯ ಬಳಿಕ, ನೂತನ ನಂದಿನಿ ಮಳಿಗೆಯು ಗ್ರಾಹಕರಿಗೆ ಅತ್ಯುತ್ತಮ ಸೇವೆಯ ಮೂಲಕ ಮನೆ ಮಾತಾಗಲಿ ಎಂದು ಶುಭ ಹಾರೈಸಿದರು.

ಒಕ್ಕೂಟದ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಡಾ. ರವಿರಾಜ ಉಡುಪ ಮಾತನಾಡಿ, ನಂದಿನಿ ಉತ್ಪನ್ನಗಳ ಗುಣಮಟ್ಟ ಮತ್ತು ವೈವಿಧ್ಯತೆಗಳ ಬಗ್ಗೆ ಮಾಹಿತಿ ನೀಡುತ್ತಾ , 145 ಕಿಂತಲೂ ಹೆಚ್ಚಿನ ವೈವಿಧ್ಯಮಯ ಹಾಲಿನ ಉತ್ಪನ್ನಗಳು ಅಂತರರಾಷ್ಟ್ರೀಯ ಗುಣಮಟ್ಟದ ಮಾನದಂಡಗಳನ್ನು ಕಾಯ್ದುಕೊಂಡು ಶುಚಿ-ರುಚಿಯಾಗಿ ಗ್ರಾಹಕರ ವಿಶ್ವಾಸಾರ್ಹತೆಯನ್ನು ನಿರಂತರವಾಗಿ ಕಾಯ್ದುಕೊಂಡು ಬರುತ್ತಿದೆ ಎಂದರು.

ದ.ಕ. ಹಾಲು ಒಕ್ಕೂಟದ ನಿರ್ದೇಶಕರುಗಳಾದ ಬೋಳ ಸದಾಶಿವ ಶೆಟ್ಟಿ, ಸಾಣೂರು ನರಸಿಂಹ ಕಾಮತ್ ಮತ್ತು ಮುಡಾರು ಸುಧಾಕರ ಶೆಟ್ಟಿ ನೂತನ ಮಳಿಗೆಗೆ ಶುಭ ಹಾರೈಸಿದರು.

ಕಾರ್ಕಳ ಪುರಸಭಾ ಸದಸ್ಯ ಶುಭದ ರಾವ್, ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಶ್ರೀಮತಿ ರೆಹಮತ್, ಉದ್ಯಮಿಗಳಾದ ಸಂದೇಶ್ ವರ್ಮ, ರಾಜೇಂದ್ರ, ನೇವಿಲ್ ಡಿಸೋಜ, ನಂದಿನಿ ಮಾರುಕಟ್ಟೆ ವಿಭಾಗದ ಅಧಿಕಾರಿ ಸಂದೀಪ್ ನಾಯಕ್ ಮತ್ತು ರಕ್ಷಿತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ನೂತನ ನಂದಿನಿ ಫ್ರಾನ್ಚೈಸಿ ಮಾಲಕರಾದ ಜೀವನ್ ಸ್ವಾಗತಿಸಿದರು. ನಂದಿನಿ ಮಾರುಕಟ್ಟೆ ವಿಭಾಗದ ಉಪ_ವ್ಯವಸ್ಥಾಪಕರಾದ ಸುಧಾಕರ್ ಪವಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Leave a Reply

Your email address will not be published. Required fields are marked *