ಹೆಬ್ರಿ: ಯಾವುದೇ ಸಂಘ ಸಂಸ್ಥೆಗಳು ಅಥವಾ ವ್ಯಕ್ತಿಗಳೆ ಆಗಲಿ ಬದ್ಧತೆಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ. ಕಳೆದ ಮೂರು ವರ್ಷದ ಹಿಂದೆ ದಿನಕ್ಕೊಂದು ಶುಭನುಡಿ ಕಾರ್ಯಕ್ರಮ ಆರಂಭಿಸಿ ನಿರಂತರವಾಗಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕೆಲಸ ನಿರಂತರವಾಗಿ ಮಾಡುತ್ತ ಬಂದಿರುವುದು ಶ್ಲಾಘನೀಯ. ಇದು ಶಾಂತಿನಿಕೇತನ ಬದ್ದತೆ ಹಾಗೂ ನಿರಂತರತೆಗೆ ಸಾಕ್ಷಿ ಎಂದು ಶಾಂತಿನಿಕೇತನ ಸೌಹಾರ್ದ ಸಹಕಾರಿ ನಿರ್ದೇಶಕ ಫ್ರಾಂಕ್ಲಿನ್ ದಾಂತೀ ಹೇಳಿದರು.

ಅವರು ಗ್ರಾಮೀಣ ಭಾಗದಲ್ಲಿ ತನ್ನ ವಿಶಿಷ್ಟ ವಿಭಿನ್ನವಾದ ಯೋಜನೆಗಳ ಮೂಲಕ ಸಾಮಾಜಿಕ ಸೇವೆಗಳ ಮೂಲಕ ಜನಮನ್ನಣೆ ಗಳಿಸಿದ ಶಾಂತಿನಿಕೇತನ ಯುವ ವೃಂದದ ದಿನಕ್ಕೊಂದು ಶುಭನುಡಿಯ 1000ನೇ ಶುಭನುಡಿ ಬಿಡುಗಡೆ ಮಾಡಿ ಮಾತನಾಡಿದರು.

ಶಾಂತಿನಿಕೇತನದ ಸಂಸ್ಥಾಪಕ ರಾಜೇಶ್ ಮಾತನಾಡಿ, ಜಗತ್ತಿನ ಸರ್ವಶ್ರೇಷ್ಠ ವ್ಯಕ್ತಿಗಳ ಆಲೋಚನೆ ಹಾಗೂ ಚಿಂತನೆಗಳನ್ನು ಶುಭನುಡಿಯಲ್ಲಿ ಬಳಸಿ ಕೆಲವು ವ್ಯಕ್ತಿಗಳಿಗೆ ಸ್ಪೂರ್ತಿಯಾಗಿದೆ.ತಂಡದ ಎಲ್ಲ ಸದಸ್ಯರಒಗ್ಗೂಡುವಿಕೆಯಿಂದ ಒಂದು ದಿನವೂ ತಪ್ಪದೇ ಕ್ಲಪ್ತ ಸಮಯದಲ್ಲಿ ರವಾನಿಸಲಾಗುತ್ತಿತ್ತು ಎಂದರು.
ಶಾಂತಿನಿಕೇತನ ಅಧ್ಯಕ್ಷ ದೀಕ್ಷಿತ್ ನಾಯಕ್ , ವಿದ್ಯಾರ್ಥಿ ಘಟಕ ಅಧ್ಯಕ್ಷೆ ಸೌಜನ್ಯ, ಉಸ್ತುವಾರಿ ರೇಷ್ಮಾ, ನಾಗರಾಜ್, ಮಹೇಶ್, ರಾಜೇಶ್ರೀ, ನವೀನ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.

