ಮಂಗಳೂರು : ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಮಂಗಳೂರು ದಕ್ಷಿಣ ವಲಯ, ಎಸ್ ಡಿ ಎಂ ಮಂಗಳ ಜ್ಯೋತಿ ಸಮಗ್ರ ಶಾಲೆ ವಾಮಾಂಜೂರು ಇವರ ಆಶ್ರಯದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯೋಗ ಶಿಕ್ಷಕ ಶೇಖರ ಕಡ್ತಲ ಇವರ ನೇತೃತ್ವದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು, ಹೆತ್ತವರು ಹಾಗೂ ಶಿಕ್ಷಕರ ವೃಂದದ ಸಮ್ಮಿಲನದಲ್ಲಿ 9ನೇ ವಿಶ್ವ ಯೋಗ ದಿನಾಚರಣೆ ಮಂಗಳ ಜ್ಯೋತಿ ಸಭಾಂಗಣದಲ್ಲಿ ನಡೆಯಿತು.
ಮಂಗಳೂರು ತಾಲೂಕು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ ಆರ್ ಈಶ್ವರ್ ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿ ಮಾತನಾಡಿ, ಸತತ ಯೋಗಾಭ್ಯಾಸ ನಿರತ ವ್ಯಕ್ತಿಯು ಚೆನ್ನಾಗಿದ್ದು,ಇತರರು ಚೆನ್ನಾಗಿ ಇರಲು ಪ್ರೇರಣೆ ನೀಡುತ್ತಾನೆ. ನಿತ್ಯ ಯೋಗಾಭ್ಯಾಸ, ಸೂರ್ಯ ನಮಸ್ಕಾರ,ವ್ಯಾಯಾಮ, ಹಾಗೂ ಪ್ರಾಣಾಯಾಮದಿಂದ ದೇಹಕ್ಕೆ ಬೇಕಾದ ವಿಟಮಿನ್ ಹಾಗೂ ಶಕ್ತಿ ದೊರೆತು, ನಿರಾಮಯವಾದ ಬದುಕನ್ನು ನಡೆಸಲು ಉತ್ತೇಜನ ನೀಡುತ್ತದೆ.ಅತ್ಯಂತ ಸಂತೋಷ ಮತ್ತು ಆನಂದಮಯ ಜೀವನಕ್ಕೆ ಯೋಗ ಅಮೃತ ಸಂಜೀವಿನಿ. ಅದನ್ನು ನಿತ್ಯ ಜೀವನದಲ್ಲಿ ರೂಡಿಸಿಕೊಂಡವರು ಧನ್ಯರು. ಅವರಂತೆ ನಾವೆಲ್ಲರೂ ಸುಂದರ ನಾಳೆಗಾಗಿ ಯೋಗಾಭ್ಯಾಸ ನಡೆಸೋಣ ಎಂದು ತಿಳಿಸಿ ಸಾಮೂಹಿಕ ಯೋಗಾಭ್ಯಾಸದಲ್ಲಿ ಪಾಲ್ಗೊಂಡರು.
ವೇದಿಕೆಯಲ್ಲಿ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ರವಿಶಂಕರ ನೀಲಾವರ, ಪ್ರೌಢಶಾಲಾ ಮುಖ್ಯಸ್ಥರಾದ ರಮೇಶ್ ಆಚಾರ್ಯ, ಪ್ರಾಥಮಿಕ ಶಾಲಾ ಮುಖ್ಯಸ್ಥೆ ಹರಿಣಾಕ್ಷಿ ,ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಅನಿತಾ ಅಶೋಕ್ ಉಪಸ್ಥಿತರಿದ್ದರು. ಅಂತರಾಷ್ಟ್ರೀಯ ಯೋಗ ಚಾಂಪಿಯನ್ ಶರತ್ ಅಮೀನ್ ಯೋಗ ಪ್ರಾತ್ಯಕ್ಷಿತೆ ನೀಡಿದರು. ಪ್ರೌಢಶಾಲಾ ಶಿಕ್ಷಕಿ ಪ್ರಸನ್ನ ವೈ ನಿರೂಪಿಸಿ ವಂದಿಸಿದರು.