ಬೆಂಗಳೂರು: ಕಳೆದ ವರ್ಷ ರಾಜ್ಯದಲ್ಲಿ ಬಿಟ್ ಕಾಯಿನ್ ಬಹುಕೋಟಿ ಅಕ್ರಮ ವ್ಯವಹಾರ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುವಂತೆ ಕೋರಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ದಯಾನಂದ್ ಅವರು ಸಿಐಡಿ ಡಿಜಿಪಿ ಎಂ.ಎ.ಸಲೀA ಅವರಿಗೆ ಪತ್ರ ಬರೆದಿದ್ದಾರೆ.
2020ರಲ್ಲಿ ಬಿಟ್ ಕಾಯಿನ್ ಹಗರಣ ಸಂಬAಧ ಬೆಂಗಳೂರಿನ ಕಾಟನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳು ಭಾಗಿಯಾಗಿರುವ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ವಿಶೇಷ ತಂಡ ರಚಿಸಿ ಹೆಚ್ಚಿನ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ಪತ್ರ ಬರೆದಿದ್ದಾರೆ.
ಈ ಹಿಂದೆ ಸಿಸಿಬಿ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ (26) ಬಂಧಿಸಿದ್ದರು. ಆರೋಪಿ ರಾಜ್ಯ ಸರ್ಕಾರದ ಇ-ಸಂಗ್ರಹಣಾ ಪೋರ್ಟಲ್ ಜಾಲತಾಣ ಹ್ಯಾಕ್ ಮಾಡಿ 46 ಕೋಟಿ ದೋಚಿದ್ದ ಸಂಗತಿ ಪತ್ತೆ ಮಾಡಿದ್ದರು. ಜೊತೆಗೆ, ಶ್ರೀಕಿ ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಸಿದ್ದ ಬಿಟ್ ಕಾಯಿನ್ ಪ್ರಕರಣಗಳು ಹೊರಬಂದಿದ್ದವು. ಆದರೆ, ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸಿರಲಿಲ್ಲ. ಸಿಸಿಬಿ ಪೊಲೀಸರು ತರಾತುರಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ನಡೆ ಹಲವು ಅನುಮಾನಕ್ಕೆ ಕಾರಣವಾಗಿತ್ತು. ಇದೀಗ, ಪೊಲೀಸ್ ಕಮಿಷನರ್ ತನಿಖೆ ಮುಂದುವರಿಸಲು ಆಸಕ್ತಿ ತೋರಿಸಿದ್ದು, ಗೃಹ ಸಚಿವರ ಸೂಚನೆ ಮೇರೆಗೆ ತನಿಖೆಗೆ ನಡೆಸಲು ಪತ್ರ ಬರೆದಿದ್ದಾರೆ.