ಕಾರ್ಕಳ : ಮಕ್ಕಳ ಸಾಹಿತ್ಯ ಸಂಗಮ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ಜಂಟಿ ಆಶ್ರಯದಲ್ಲಿ ಲೇಖಕಿ ಶ್ರೀಮತಿ ಸಾವಿತ್ರಿ ಮನೋಹರ್ ಇವರ 22ನೇ ನಾಟಕ ಕೃತಿ “ನಮ್ಮ ಸಂಸಾರ” ಪ್ರಕಾಶ್ ಹೋಟೆಲ್ ನ ಸಂಭ್ರಮ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡಿತು.
ಹಿರಿಯ ಲೇಖಕಿ ಶ್ರೀಮತಿ ಇಂದಿರಾ ಹಾಲಂಬಿಯವರು ಕೃತಿಯನ್ನು ಅನಾವರಣಗೊಳಿಸಿ ನಾಟಕದ ತುಂಬೆಲ್ಲ ಹರಡಿಕೊಂಡಿರುವ ಸಂಸಾರಿಕ ಬಂಧ ಹೊಸ ರೂಪ ಹೊತ್ತು ನಿಂತ ಸ್ತ್ರೀವಾದ ಹಾಸ್ಯ ಲೇಪದೊಂದಿಗೆ ಸುಖಾಂತ್ಯಗೊAಡಿರುವ ಬಗೆಯನ್ನು ಮೆಚ್ಚಿಕೊಂಡರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ತಜ್ಞ ಡಾ| ಮಹಾಬಲೇಶ್ವರ ರಾವ್ ಮಾತನಾಡಿ, ನಾಟಕದಲ್ಲಿ ವಾಸ್ತವ ಪ್ರಜ್ಞೆ ಹಾಸು ಹೊಕ್ಕಗಿರುವ ರೀತಿ, ಲೇಖಕಿಯ ಬರವಣಿಗೆಯ ಪ್ರೀತಿ, ಸಂಸಾರವೇ ಸಾಹಿತ್ಯವಾಗುವ ನೀತಿ ಇಲ್ಲಿ ನಾಟಕದ ರೂಪಕ್ಕೆ ಇಂಬು ಕೊಡುವಂತಿದೆ ಎಂದರು. ಮುಖ್ಯ ಅತಿಥಿ ಮಕ್ಕಳ ಸಾಹಿತ್ಯ ಸಂಗಮದ ಕೋಶಾಧಿಕಾರಿ ಶ್ರೀ ಅನಂತಪದ್ಮನಾಭ ರಾವ್ ಸಾಹಿತ್ಯದ ಅಭಿರುಚಿ ಸಂಸಾರದ ಸೂತ್ರವನ್ನು ಗಟ್ಟಿಗೊಳಿಸುತ್ತದೆ ಎಂದರು.
ಮಕ್ಕಳ ಸಾಹಿತ್ಯ ಸಂಗಮ ಕಾರ್ಕಳ ಘಟಕದ ಅಧ್ಯಕ್ಷರಾದ ತುಕಾರಾಮ ನಾಯಕ್ ಮತ್ತು ಲೇಖಕಿಯ ಪತಿ ವಿ ಮನೋಹರ್ ರಾವ್ ಉಪಸ್ಥಿತರಿದ್ದರು.
ಮಕ್ಕಳ ಸಾಹಿತ್ಯ ಸಂಗಮ ಕಾರ್ಕಳ ಘಟಕದ ಉಪಾಧ್ಯಕ್ಷರಾದ ಜಾನ್ನವಿ ಪ್ರಾರ್ಥಿಸಿದರು. ಲೇಖಕಿ ಸಾವಿತ್ರಿ ಮನೋಹರ್ ಸ್ವಾಗತಿಸಿದರು. ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ಅಧ್ಯಕ್ಷೆ ಶ್ರೀಮತಿ ಮಿತ್ರಪ್ರಭಾ ಹೆಗ್ಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು