ಮುಲ್ಕಿ: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮುಲ್ಕಿ ವಲಯ,ಪೋಲಿಸ್ ಠಾಣೆ ಮತ್ತು ಗುರು ಬ್ರಹ್ಮ ಫ್ರೆಂಡ್ಸ್ ಪುನರೂರು ಇವರ ಸಂಯುಕ್ತ ಆಶ್ರಯದಲ್ಲಿ ಪುನರೂರು ಭಾರತ್ ಮಾತಾ ಅನುದಾನಿತ ಶಾಲೆಯಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಜು.2 ರಂದು ಜರುಗಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಕರುಣಾಕಾರ ಆಚಾರ್ಯ ಕಾರ್ಯಕ್ರಮ ಉದ್ಘಾಟಿಸಿದರು.
ಮುಲ್ಕಿ ಪೊಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ ಮಾರುತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿಷೇಧಿತ ಡ್ರಗ್ಸ್ ಸೇವನೆಗೆ ಸಾವಿರಾರು ಮಕ್ಕಳು ಬಲಿಯಾಗುತ್ತಿರುವುದು ಆತಂಕದ ವಿಷಯ. ಡ್ರಗ್ಸ್ ಸೇವನೆಯಿಂದ ಮಾನಸಿಕ ಸ್ಥಿಮಿತ ಕಳೆದುಕೊಳ್ಳುವುದರ ಜೊತೆಗೆ ಜೀವನದಲ್ಲಿ ತುಂಬಲಾರದ ನಷ್ಟ ಅನುಭವಿಸುತ್ತಾರೆ. ಮಕ್ಕಳ ಬದಲಾವಣೆ ಹೆತ್ತವರಿಂದಲೇ ಆಗಬೇಕಾಗಿದೆ, ಮಾದಕ ವಸ್ತುಗಳಿಂದ ದೂರ ಇದ್ದರೆ ಭವ್ಯ ಭಾರತದ ನಿರ್ಮಾಣ ಸಾಧ್ಯ ಎಂದರು.
ಶಾಲೆಯ ಆಸುಪಾಸು ಮಾದಕ ವಸ್ತುಗಳ ಮಾರಾಟ ಹಾಗೂ ಸೇವನೆ ಕಂಡುಬಂದಲ್ಲಿ ಕೂಡಲೇ ಸಮೀಪದ ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.
ಜನಜಾಗೃತಿ ವೇದಿಕೆ ಮುಲ್ಕಿ ವಲಯದ ಅಧ್ಯಕ್ಷ ವಿನೋದ್ ಎಸ್. ಸಾಲ್ಯಾನ್ ಬೆಳ್ಳಾಯ ಮಾತನಾಡಿ, ಮಕ್ಕಳು ದುಶ್ಚಟಗಳಿಗೆ ದಾಸರಾಗದೆ ಸತ್ಪ್ರಜೆಗಳಾಗಬೇಕು ಎಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕಿಲ್ಪಾಡಿ ಒಕ್ಕೂಟದ ಅಧ್ಯಕ್ಷೆ ಪುಷ್ಪಾವತಿ, ಮುಲ್ಕಿ ಠಾಣಾ ಎಎಸ್ ಐ ಚಂದ್ರಶೇಖರ್, ಸಿಬ್ಬಂದಿ ಸತೀಶ್, ಪುನರೂರು ಗುರು ಬ್ರಹ್ಮ ಫ್ರೆಂಡ್ಸ್ ಅಧ್ಯಕ್ಷ ಗೋಪಾಲಕೃಷ್ಣ, ಭಾರತಮಾತಾ ಅನುದಾನಿತ ಶಾಲೆಯ ಮುಖ್ಯೋಪಾಧ್ಯಾಯ ರಾಘವೇಂದ್ರ ರಾವ್ ಮತ್ತಿತರರು ಉಪಸ್ಥಿತರಿದ್ದರು.