ಉಡುಪಿ:ಕರಾವಳಿ ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂದ ಮಳೆಯ ಅಬ್ಬರ ತೀವೃಗೊಂಡಿದ್ದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಉಡುಪಿ ಜಿಲ್ಲೆಯಲ್ಲಿ ವರುಣನ ಅಬ್ಬರಕ್ಕೆ ಪ್ರತ್ಯೇಕ ಕಡೆಗಳಲ್ಲಿ ಮೂವರು ಜಲಸಮಾಧಿಯಾಗಿದ್ದಾರೆ.
ಭಾರೀ ಮಳೆಗೆ ಉಕ್ಕಿ ಹರಿಯುತ್ತಿರುವ ಕುಬ್ಜಾ ನದಿಯಲ್ಲಿ ಅರ್ಚಕರೊಬ್ಬರು ನೀರುಪಾಲಾಗಿದ್ದಾರೆ. ಕುಂದಾಪುರದ ಕಮಲಶಿಲೆ ದೇವಾಲಯದ ಅರ್ಚಕ ಶೇಷಾದ್ರಿ ಐತಾಳ್( 75) ನೀರಿನಲ್ಲಿ ಕೊಚ್ಚಿಹೋಗಿ ಮೃತಪಟ್ಟಿದ್ದಾರೆ. ಕಮಲಶಿಲೆ ಸಮೀಪದ ತಪ್ಪಲು ನಿವಾಸಿಯಾದ ಶೇಷಾದ್ರಿ ಐತಾಳ್ ಎಂದಿನಂತೆ ಬುಧವಾರ ಮುಂಜಾನೆಯ ಪೂಜೆಗಾಗಿ ಆಗಮಿಸುತ್ತಿದ್ದರು.
ಕಳೆದ ಎರಡು ದಿನಗಳಿಂದ ಸುರಿದ ನಿರಂತರ ಮಳೆಗೆ ಕಮಲಶಿಲೆ ದೇವಳದ ಪಕ್ಕದಲ್ಲಿ ಹರಿಯುವ ಕುಬ್ಜಾ ನದಿ ಉಕ್ಕಿ ಹರಿಯುತ್ತಿದ್ದು, ಅರ್ಚಕರು ಸ್ನಾನಕ್ಕೆ ತೆರಳಿರುವ ವೇಳೆ ಆಯತ ತಪ್ಪಿ ನದಿಗೆ ಬಿದ್ದು ನೀರು ಪಾಲಾಗಿದ್ದಾರೆ ಎಂದು ಶಂಕಿಸಲಾಗಿದೆ. ನದಿಗೆ ಬಿದ್ದ ಜಾಗದಿಂದ ಸುಮಾರು ನೂರು ಮೀಟರ್ ದೂರಲ್ಲಿ ಶೇಷಾದ್ರಿ ಐತಾಳ್ ಅವರ ಮೃತದೇಹ ಪತ್ತೆಯಾಗಿದ್ದು, ಮುಳುಗು ತಜ್ಞ ಮಂಜುನಾಥ್ ನಾಯಕ್ ತಂಡ ಮೃತದೇಹ ಪತ್ತೆ ಕಾರ್ಯಾಚರಣೆ ನಡೆಸಿದ್ದಾರೆ. ಘಟನೆ ಸಂಬಂಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತೆಕ್ಕಟ್ಟೆಯಲ್ಲಿ ಕೂಡ ಮಳೆಯ ಅವಾಂತರದಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ದಿವಾಕರ್ ಶೆಟ್ಟಿ ಮೃತ ದುರ್ದೈವಿ. ನಿನ್ನೆ ತಡರಾತ್ರಿ ಹೋಟೆಲ್ ಕೆಲಸ ಮುಗಿಸಿ ಮನೆಗೆ ತೆರಳುವ ವೇಳೆ ಬೈಕ್ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದು, ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಮುಳುಗು ತಜ್ಞ ಈಶ್ವರಮಲ್ಪೆ ಮೃತದೇಹ ಮೇಲೆತ್ತುವ ಕಾರ್ಯಾಚರಣೆ ನಡೆಸಿದ್ದಾರೆ. ಘಟನೆ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಭಾರೀ ಮಳೆಯಾಗುತ್ತಿದ್ದು, ಪಡುಬಿದ್ರಿ ಸಮೀಪದ ಕಾಡಿಪಟ್ಣದಲ್ಲಿ ಕಡಲ್ಕೊರೆತ ಹೆಚ್ಚಾಗಿ ತಡೆಗೋಡೆ ಸಮುದ್ರ ಪಾಲಾಗಿದೆ. ಅಲ್ಲದೇ ಅಲೆಗಳ ಅಬ್ಬರಕ್ಕೆ ತೆಂಗಿನ ಮರಗಳು ಧರೆಗೆ ಉರುಳಿವೆ. ಇನ್ನು ಮಳೆಯ ಅವಾಂತರ ಹೆಚ್ಚಾಗುತ್ತಿದ್ದು, ಮಣಿಪಾಲ ರಸ್ತೆ ಬದಿಯಲ್ಲಿ ಗುಡ್ಡ ಬಿದ್ದಿದೆ. ಅಲ್ಲದೇ ಬೀಡಿನಗುಡ್ಡೆಯ ನಾಗಬನದ ಬಳಿ ಹಳ್ಳಕ್ಕೆ ಬಿದ್ದು ವ್ಯಕ್ತಿ ಸಾವನ್ನಪ್ಪಿದ್ದಾರೆ. ಈಗಾಗಲೇ ಹವಾಮಾನ ಇಲಾಖೆಯು ಉಡುಪಿ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಿದ್ದು ಮುಂದಿನ 24 ಗಂಟೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಒಟ್ಟಿನಲ್ಲಿ ತಡವಾಗಿ ಆರಂಭವಾದ ಮುಂಗಾರು ಸಾಕಷ್ಟು ಆವಾಂತರ ಸೃಷ್ಟಿಸುತ್ತಿದೆ.