Share this news

ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಮಳೆ ಅಬ್ಬರ ಜೋರಾಗಿದೆ.ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಗೆ ಶಾಲೆಯೊಂದರ ಮೇಲ್ಛಾವಣಿ ಕುಸಿದುಬಿದ್ದಿದ್ದು, ರಜೆ ಇದ್ದಿದ್ದರಿಂದ ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.

ಮಂಗಳೂರು ಹೊರಹೊಲಯದ ತಲಪಾಡಿಯ ಶಾರದಾ ಸ್ಕೂಲ್ ಮತ್ತು ಕಾಲೇಜಿನ ಶೀಟ್ ಮೇಲ್ಛಾವಣಿ ಕುಸಿದುಬಿದ್ದಿದೆ. ಇದರಿಂದ ಶಾಲಾ ವಾಹನಗಳು ಸಂಪೂರ್ಣ ಜಖಂ ಆಗಿವೆ. ಅದೃಷ್ಟವಶಾತ್ ಶಾಲಾ, ಕಾಲೇಜುಗಳಿಗೆ ರಜೆ ನೀಡಿದ್ದರಿಂದ ಭಾರೀ ಅನಾಹುತ ತಪ್ಪಿದೆ. ನಿನ್ನೆ (ಜುಲೈ 05) ಈ ಘಟನೆ ನಡೆದಿದ್ದು ಇಂದು(ಜುಲೈ 06) ಬೆಳಕಿಗೆ ಬಂದಿದೆ.
ದೇವಿನಗರದ ಶಾರದ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಕ್ಯಾಂಪಸ್‌ನ ಆರು ಅಂತಸ್ತಿನ ಶಾಲಾ ಕಟ್ಟಡದ ಮೇಲೆ ಇತ್ತೀಚೆಗೆ ಶೀಟ್ ಹಾಕಲಾಗಿತ್ತು. ಇದೀಗ ಭಾರಿ ಗಾಳಿ-ಮಳೆಯಿಂದಾಗಿ ಶೀಟ್ ಛಾವಣಿ ಮತ್ತು ಶೀಟ್ ಜೊತೆಗೆ ಹಾಕಲಾಗಿದ್ದ ಭಾರೀ ಗಾತ್ರದ ಕಬ್ಬಿಣದ ಸಲಾಕೆಗಳು ಉರುಳಿ ಬಿದ್ದಿವೆ. ಸದ್ಯ ಜಿಲ್ಲಾಡಳಿತ ಶಾಲಾ, ಕಾಲೇಜುಗಳಿಗೆ ರಜೆ ನೀಡಿದ್ದರಿಂದ ಅನಾಹುತ ತಪ್ಪಿದೆ ಎಂದು ಶಾಲಾ ಆಡಳಿತ ಮಂಡಳಿ ನಿಟ್ಟುಸಿರು ಬಿಟ್ಟಿದೆ.

ಕಳೆದ ಎರಡು ದಿನಗಳಿಂದ ಕರಾವಳಿ ಭಾಗದಲ್ಲಿ ಗಾಳಿ ಸಹಿತ ಭಾರೀ ಮಳೆಯಾಗಿದೆ. ಇದರಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಕೆಲ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಮುಂಗಾರು ಮುನಿಸಿಗೆ ಇಬ್ಬರು ಜೀವ ಕಳೆದುಕೊಂಡಿದ್ದಾರೆ.


ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಕರಾವಳಿ ಭಾಗದ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಮಾಂಕಾಳ ವೈದ್ಯ ಅವರಿಗೆ ಸೂಚನೆ ನೀಡಿದ್ದಾರೆ.

Leave a Reply

Your email address will not be published. Required fields are marked *