ಬೆಂಗಳೂರು: ಸಿಎಂ ಸಿದ್ದರಾಮಯ್ಯನವರು ಬಜೆಟ್ ಪುಸ್ತಕದಲ್ಲಿ ಆರ್ಥಿಕ ಮುನ್ನೋಟಕ್ಕಿಂತ ರಾಜಕೀಯ ಲಾಭದ ಲೆಕ್ಕಾಚಾರ ಅಡಗಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.

ಹಿಂದಿನ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ನಿಂದನೆಗೆ ಬಳಸಿದಷ್ಟು ಆದ್ಯತೆಯನ್ನು ಹೊಸ ಯೋಜನೆಗಳ ಘೋಷಣೆಗೆ ನೀಡದೇ ರಾಜ್ಯದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಕೊಳ್ಳಿಯಿಟ್ಟಿದೆ ಎಂದು ಸುನಿಲ್ ಆರೋಪಿಸಿದ್ದಾರೆ.
ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ೫೨೦೦೦ ಕೋಟಿ ರೂ. ಖರ್ಚಾಗುತ್ತದೆ ಎಂದು ಲೆಕ್ಕಕೊಟ್ಟಿದ್ದರೂ, ಅದಕ್ಕೆ ಯಾವ ಮೂಲದಿಂದ ಹಣಕಾಸು ಹೊಂದಿಸುತ್ತಾರೆಂಬ ಬಗ್ಗೆ ಸ್ಪಷ್ಟತೆ ಇಲ್ಲ. ಜಿಎಸ್ಟಿ ಪರಿಹಾರ, ತೆರಿಗೆ ಹಂಚಿಕೆಯ ವಿಚಾರಗಳಲ್ಲಿ ಕೇಂದ್ರದ ಟೀಕೆ ಮತ್ತು ಅನಗತ್ಯ ವಿಚಾರಗಳಿಗೆ ಮಾತ್ರ ಮಹತ್ವ ನೀಡಿ ಸತ್ಯ ಮರೆಮಾಚಿದ್ದಾರೆ.
ತೆರಿಗೆ ಪ್ರಸ್ತಾಪವಂತೂ ಭವಿಷ್ಯದಲ್ಲಿ ” ಸಿದ್ದು ಟ್ಯಾಕ್ಸ್ ” ಎಂದೇ ಲೋಕವಿಖ್ಯಾತಿಯಾಗುವ ಅಪಾಯ ಇದೆ. ಅಬಕಾರಿ ತೆರಿಗೆ ಹೆಚ್ಚಳ ಹೊರತುಪಡಿಸಿ ಇನ್ನುಳಿದ ಯಾವ ಇಲಾಖೆಯಲ್ಲೂ ತೆರಿಗೆ ಹೆಚ್ಚಳದ ಪ್ರಮಾಣ ನಮೂದಿಸಿಲ್ಲ. ಭವಿಷ್ಯದಲ್ಲಿ ನಾಗರಿಕರ ಜೇಬಿಗೆ ಕತ್ತರಿಯ ಬದಲು ಹಗಲುದರೋಡೆ ಮಾಡುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ

ಒಟ್ಟಿನಲ್ಲಿ ಸಿದ್ದರಾಮಯ್ಯ ಸರ್ಕಾರ ಬೆಳಕೇ ಇಲ್ಲದ ಕನಸು ಕಾಣುವುದಕ್ಕೂ ಅನರ್ಹವಾದ ಕತ್ತಲೆಯ ಹಾದಿಗೆ ರಾಜ್ಯದ ಜನರನ್ನು ಎಳೆದೊಯ್ಯುವ ಪ್ರಯತ್ನವನ್ನು ನಡೆಸಿದೆ. “ಎಡವುವುದಕ್ಕಾಗಿಯೇ ನಡೆದರೆ ಒಪ್ಪುವರೇನಯ್ಯ ? ಎಂದು ಹೊಸ ಕವನದ ಸಾಲು ಸೇರಿಸಿದರೆ ಬಜೆಟ್ ನ ಮೆರಗು ಹೆಚ್ಚಬಹುದು ಎಂದು ಬಜೆಟ್ ಕುರಿತು ವಿ ಸುನಿಲ್ ಕುಮಾರ್ ವ್ಯಂಗ್ಯವಾಡಿದ್ದಾರೆ

