ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿಗಳಾದ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಆಪ್ತನಿಂದಲೇ ಜೈನಮುನಿಗಳು ಹತ್ಯೆಯಾಗಿದ್ದಾರೆ. ಜೊತೆಗೆ ಆಶ್ರಮದಲ್ಲೇ ಜೈನಮುನಿಯವರನ್ನ ಕೊಲೆ ಮಾಡಿ, ಸಂಬAಧಿಕರ ಗದ್ದೆಯಲ್ಲಿ ಶವ ಎಸೆದಿರುವ ಕುರಿತು ಆರೋಪಿಗಳು ಪ್ರಾಥಮಿಕ ತನಿಖೆಯಲ್ಲಿ ಹೇಳಿರುವುದಾಗಿ ಚಿಕ್ಕೋಡಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಮೂಲತಃ ಖಟಕಬಾವಿ ಗ್ರಾಮದವನೇ ಆಗಿದ್ದ ಪ್ರಮುಖ ಆರೋಪಿ, ಜೈನಮುನಿ ಜೊತೆ ಉತ್ತಮ ಒಡನಾಟ ಹೊಂದಿದ್ದು, ಜೈನಮುನಿಗಳ ವಿಶ್ವಾಸಗಳಿಸಿ ಹಿರೇಕೋಡಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದನಂತೆ. ಬಳಿಕ ಇದನ್ನೇ ಲಾಭ ಮಾಡಿಕೊಂಡು ಅವರ ಬಳಿ ಲಕ್ಷಾಂತರ ರೂಪಾಯಿ ಹಣವನ್ನ ಪಡೆದಿದ್ದಾನೆ. ಇದೇ ಹಣವನ್ನ ವಾಪಸ್ ಕೇಳಿದ್ದಕ್ಕೆ ಇದೀಗ ಜೈನಮುನಿಯನ್ನು ಕೊಲೆ ಮಾಡಿದ್ದಾನೆ. ಈ ಕೃತ್ಯಕ್ಕೆ ಚಿಕ್ಕೋಡಿ ಮೂಲದ ಯುವಕನ ಸಹಾಯವನ್ನ ಪಡೆದಿದ್ದನಂತೆ. ಆಶ್ರಮದಲ್ಲೇ ಜೈನಮುನಿಯವರನ್ನ ಕೊಂದು, ಸಂಬAಧಿಕರ ಗದ್ದೆಯ ಕೊಳವೆಬಾವಿಯಲ್ಲಿ ಎಸೆದಿದ್ದಾಗಿ ವಿಚಾರಣೆ ವೇಳೆ ಪ್ರಮುಖ ಆರೋಪಿ ಹೇಳಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಪೊಲೀಸರು ಇಬ್ಬರನ್ನೂ ಬಂಧಿಸಿ, ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಆದರೆ, ಇನ್ನೂ ಜೈನಮುನಿಗಳ ಮೃತ ದೇಹ ಸಿಕ್ಕಿಲ್ಲ