ಉಡುಪಿ: ಕಳೆದ ಎರಡು ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದ್ದು ವರುಣವ ಮುನಿಸಿಗೆ 7 ಮಂದಿ ಜೀವ ಕಳೆದುಕೊಂಡಿದ್ದಾರೆ. ಗಾಳಿ ಮಳೆಗೆ ಮನೆಗಳು ಕುಸಿದಿದ್ದು, ಕೆಲವು ಮನೆಗಳಿಗೆ ಭಾಗಶಃ ಹಾನಿಯಾಗಿದೆ.
ಇಂದು ಉಡುಪಿಗೆ ಭೆಟಿ ನೀಡಿದ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಳೆ ಅನಾಹುತಗಳಿಂದ ಮೃತ ಎರಡು ಕುಟುಂಬಗಳಿಗೆ ಸ್ಥಳದಲ್ಲಿಯೇ ತಲಾ 5 ಲಕ್ಷ ರೂ. ಪರಿಹಾರ ವಿತರಣೆ ಮಾಡಿ ಸಾಂತ್ವನ ಹೇಳಿದ್ದಾರೆ. ಅಲ್ಲದೆ ಮೃತಪಟ್ಟ ಇತರರ ಕುಟುಂಬದವರಿಗೂ ಪರಿಹಾರ ನೀಡುವುದಾಗಿ ಹೇಳಿದ್ದಾರೆ. ಜತೆಗೆ ಮನೆಗಳ ಕುಸಿತ ಹಾಗೂ ಹಾನಿಯಾದವರಿಗೂ ಶೀಘ್ರದಲ್ಲೇ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
ಬಳಿಕ ಪಡುಬಿದ್ರಿಯಲ್ಲಿ ಮಾತನಾಡಿದ ಅವರು ಉಡುಪಿಯಲ್ಲಿ ತಡವಾದರೂ ಮಳೆ ಬರುತ್ತಿದೆ. ಬಜೆಟ್ ಇದ್ದ ಕಾರಣ ನಿನ್ನೆ ಉಡುಪಿಗೆ ಭೇಟಿ ನೀಡಲು ಸಾಧ್ಯವಾಗಿಲ್ಲ. ಜಿಲ್ಲಾಧಿಕಾರಿ ಜೊತೆ ಹಾಗೂ ಶಾಸಕರ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದರು. ಕಡಲ ಕೊರೆತದಿಂದ ಸಾಕಷ್ಟು ಭೂಪ್ರದೇಶ ಹಾನಿಯಾಗಿದ್ದು, ಮಳೆಯಿಂದ ಹಲವರು ಮನೆ ಕಳೆದುಕೊಂಡಿದ್ದಾರೆ. ಜಿಲ್ಲಾಧಿಕಾರಿಗಳ ಜೊತೆ ಪುನರ್ ಪರಿಶೀಲನಾ ಸಭೆ ನಡೆಸಿ ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಕೈಗೊಳ್ಳುತ್ತೇವೆ. ಮುಂಜಾಗ್ರತಾ ಕ್ರಮಕೈಗೊಳ್ಳಲು ಈಗಾಗಲೇ ಸೂಚನೆ ನೀಡಿದ್ದೇನೆ ಎಂದರು.