ಕಾರ್ಕಳ : ಚಿಕ್ಕೋಡಿ ಹಿರೇಕೋಡಿಯ ನಂದಿಪರ್ವತ ಆಶ್ರಮದ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜ ಅವರ ಹತ್ಯೆ ಮನುಕುಲವೇ ನಾಚಿಕೆಪಡುವಂತ ದುಷ್ಕೃತ್ಯ. ಇದು ಕೇವಲ ಒಬ್ಬ ವ್ಯಕ್ತಿಯ ಹತ್ಯೆಯಲ್ಲ ಸರ್ವ ಮನುಕುಲದ ಹತ್ಯೆಯಾಗಿದೆ. ತನ್ನ ಜೀವನವನ್ನು ಸೇವೆಗಾಗಿ ಮುಡಿಪಾಗಿಟ್ಟ, ಜೀವನ ಪರ್ಯಂತ ಮಾನವ ಸಮುದಾಯಕ್ಕೆ ಶಾಂತಿಯ ಸಂದೇಶವನ್ನು ಸಾರುತ್ತಿದ್ದ ಜೈನ ಮುನಿಗಳ ಹತ್ಯೆ ಕೇವಲ ಒಂದು ಸಮುದಾಯಕ್ಕೆ ಮಾತ್ರವಲ್ಲದೆ ಸಮಸ್ತ ಮಾನವ ಸಮುದಾಯಕ್ಕೆ ಆಘಾತ ಉಂಟು ಮಾಡಿದೆ. ಈ ಅಮಾನವೀಯ ಕೃತ್ಯವನ್ನು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ರಾಷ್ಟ್ರೀಯ ಕಾರ್ಯಕಾರಿ ನಿರ್ದೇಶಕ ರೋಹಿತ್ ಕುಮಾರ್ ಕಟೀಲ್ ತೀವೃವಾಗಿ ಖಂಡಿಸಿದ್ದಾರೆ.
ಮನುಕುಲದ ಸೇವೆಗಾಗಿ ತಮ್ಮ ಆಸೆ , ಆಕಾಂಕ್ಷೆ , ಆಸ್ತಿ , ಸಂಪತ್ತು, ಕುಟುಂಬವನ್ನು ತ್ಯಜಿಸಿರುವ ಜೈನ ಮುನಿಗಳು ಒಂದು ಸಮುದಾಯಕ್ಕೆ ಸೀಮಿತವಾಗದೆ ಜಗತ್ತಿಗೆ ಶಾಂತಿ, ಅಹಿಂಸೆ ಸಂದೇಶ ನೀಡುವವರು . ಅವರ ಸದ್ಗುಣ, ಸಹಾಯವನ್ನು ದುರುಪಯೋಗಪಡಿಸಿಕೊಂಡು ಕೊಲೆ ಮಾಡುವ ಮಟ್ಟಕ್ಕೆ ಇಳಿದಿರುವ ಕೊಲೆಗಡುಕರಿಗೆ ಕಠಿಣ ಶಿಕ್ಷೆಯಾಗಬೇಕು. ಸರಕಾರ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಂಡು ತಕ್ಷಣವೇ ಶಿಕ್ಷೆಗೊಳಪಡಿಸಬೇಕೆಂದು ಅವರು ಆಗ್ರಹಿಸಿದ್ದಾರೆ .